

ತುಮಕೂರು: ಬಿದರೆಕಟ್ಟೆಯ ತುಮಕೂರು ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್‌ಗೆ ಶಿಕ್ಷಣ ಭೀಷ್ಮ ಡಾ.ಎಚ್.ಎಂ.ಗಂಗಾಧರಯ್ಯ ಅವರ ಹೆಸರಿಡುವಂತೆ ಕನ್ನಡ ಪರ ಹಾಗೂ ದಲಿತ ಸಂಘಟನೆಗಳ ಒತ್ತಾಯಿಸಿವೆ.
ವಿವಿಯ ಕುಲಸಚಿವೆ ನಾಹಿದಾ ಜಮ್ ಜಮ್ ಅವರನ್ನು ಶುಕ್ರವಾರ ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರ ನಿಯೋಗವು ಭೇಟಿ ಮಾಡಿ ಹೊಸ ಕ್ಯಾಂಪಸ್ ‘ಜ್ಞಾನಸಿರಿ’ಗೆ ಎಚ್.ಎಂ.ಗಂಗಾಧರಯ್ಯ ಹೆಸರಿಡುವಂತೆ ಮನವಿ ಸಲ್ಲಿಸಿತು.
ಈ ವೇಳೆ ಮಾತನಾಡಿದ ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್, ಗ್ರಾಮೀಣ ಭಾಗದ ಬಡ,ದಲಿತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಆಶಯದೊಂದಿಗೆ ಸನಿವಾಸ ಪ್ರೌಢಶಾಲೆಯೊಂದನ್ನು ಆರಂಭಿಸಿ ಹಂತ ಹಂತವಾಗಿ ಶಾಲಾ-ಕಾಲೇಜುಗಳ ಜತೆಗೆ ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪನೆ ಮಾಡಿ ಎಲ್‌ಕೆಜಿಯಿಂದ ಸ್ನಾತಕೋತ್ತರ ಪದವಿ ವರೆಗೆ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ನೀಡಿದ್ದು ಶಿಕ್ಷಣ ಭೀಷ್ಮ ಎಂದು ಬಿರುದಾಂಕಿತರಾಗಿದ್ದಾರೆ ಎಂದರು.
2004ರಲ್ಲಿ ತುಮಕೂರು ವಿಶ್ವವಿದ್ಯಾಲಯ ಸ್ಥಾಪನೆಗೊಂಡಿದ್ದು ಜಿಲ್ಲೆಗೊಂದು ವಿವಿಯನ್ನು ತರಲು ಪ್ರಮುಖ ಕಾರಣಕರ್ತರು ಅಂದು ಉನ್ನತಶಿಕ್ಷಣ ಸಚಿವರಾಗಿದ್ದ ಪರಮೇಶ್ವರ್ ಅವರು. ಪರಮೇಶ್ವರ ಈಗ ಗೃಹಸಚಿವರಾಗಿದ್ದು ಜಿಲ್ಲಾ ಉಸ್ತುವಾರಿ ಹೊಣೆ ಸಹ ಹೊತ್ತಿದ್ದಾರೆ. ಹಾಗಾಗಿ, ಬಿದರೆಕಟ್ಟೆಯಲ್ಲಿ ಮುಂದಿನ ತಿಂಗಳು ಉದ್ಘಾಟನೆಗೊಳ್ಳಲಿರುವ ತುಮಕೂರು ವಿವಿ ಹೊಸ ಕ್ಯಾಂಪಸ್‌ಗೆ ಶಿಕ್ಷಣ ಭೀಷ್ಮ ಡಾ.ಎಚ್.ಎಂ.ಗಂಗಾಧರಯ್ಯ ಹೆಸರಿಟ್ಟು, ಅವರ ಹೆಸರನ್ನು ಶಾಶ್ವತವಾಗಿಸುವಂತೆ ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ, ದಲಿತ ಸಮುದಾಯದಲ್ಲಿ ಹುಟ್ಟಿ, ತಮ್ಮಂತೆಯೇ ಸಮುದಾಯದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಮಹದಾಸೆಯಿಂದ ಹಲವಾರು ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ನೀಡಿ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಕಾರಣರಾಗಿದ್ದಾರೆ. ಹಾಗಾಗಿ ಅವರ ಹೆಸರನ್ನು ನೂತನ ಕ್ಯಾಂಪಸ್‌ಗೆ ಇಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಈ ವೇಳೆ ಹಿಂದುಳಿದ ಸಮುದಾಯಗಳ ಒಕ್ಕೂಟದ ಮುಖಂಡ ಕೆಂಪರಾಜು, ಮುಖಂಡರಾದ ಪ್ರಕಾಶ್ ಚಕ್ರವರ್ತಿ, ಕನ್ನಡ ಪ್ರಕಾಶ್,ಸತೀಶ್, ಟಿ.ಕೆ.ಆನಂದ್, ಉಮೇಶ್, ಕೋಮಲ, ಆದಿಲ್ ಪಾಷ, ಮಹೇಶ್, ರಾಮಣ್ಣ, ಮಂಜೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.