ಜಿಲ್ಲೆ ಅಭಿವೃದ್ಧಿಗೆ 150 ಕೋಟಿ ರೂ. ಬಿಡುಗಡೆ

web 2
Published on

ಚಿಕ್ಕಮಗಳೂರು: ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಡಿ 150 ಕೋಟಿ ರೂ. ಅನುದಾನದಲ್ಲಿ ಕಾಮಗಾರಿಗಳು ನಡೆಯುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

ತಾಲೂಕಿನ ಗಾಳಿಹಳ್ಳಿ ಗ್ರಾಮದ ಅಣ್ಣಿಂದಡಿಕೆ-ಭದ್ರಕಾಳಿ ಬನದ ರಸ್ತೆ ಕಾಮಗಾರಿಯನ್ನು ಶನಿವಾರ ವೀಕ್ಷಿಸಿ ಮಾತನಾಡಿದರು.

ಪ್ರವಾಸೋದ್ಯಮ ಇಲಾಖೆಯಿಂದ ಕಳಸಾಪುರ ರಸ್ತೆ ಮಾರ್ಗವಾಗಿ ಗಾಳಿಹಳ್ಳಿ, ಅಣ್ಣಿಂದಡಿಕೆ, ಭದ್ರಕಾಳಿ ಬನಕ್ಕೆ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ನಡೆಯುತ್ತಿದ್ದು ಅಣ್ಣಿಂದಡಿಕೆ ಗ್ರಾಮದ ಒಳಗೂ ರಸ್ತೆ ಮಾಡುವಂತೆ ಗ್ರಾಮಸ್ಥರು ಕೋರಿದ್ದಾರೆ. ಈ ಬಗ್ಗೆ ಅನುದಾನ ಆಧರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಗಾಳಿಹಳ್ಳಿ ಭದ್ರಕಾಳಿ ಬನಕ್ಕೆ ಪ್ರವಾಸಿಗರು ಬರುವುದರಿಂದ ಪ್ರವಾಸೋದ್ಯಮ ಇಲಾಖೆಯಿಂದಲೇ ರಸ್ತೆ ನಿರ್ವಣಕ್ಕೆ ಅನುದಾನ ಬಿಡುಗಡೆಯಾಗಿದೆ. ಬೈರಾಪುರ ಹಾಗೂ ಕರಗಡ ಕಾಮಗಾರಿಯ ಟೆಂಡರ್ ಮುಗಿದಿದ್ದು ಶೀಘ್ರ ಕೆಲಸ ಆರಂಭಿಸಲಾಗುವುದು ಎಂದು ತಿಳಿಸಿದರು.

ಲಾಕ್​ಡೌನ್ ಕಾರಣ ಹಣಕಾಸು ಇಲಾಖೆಯಿಂದ ವಿವಿಧ ಯೋಜನೆಗಳಿಗೆ ಅನುದಾನ ಬಿಡುಗಡೆ ತಡವಾಗಿತ್ತು. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಪ್ರವಾಸೋದ್ಯಮ ಒಳಗೊಂಡು ವಿವಿಧ ಕಾಮಗಾರಿಗಳನ್ನು ಪ್ರಾರಂಭಿಸುವ ಕುರಿತು ರ್ಚಚಿಸಿ ನಿರ್ದೇಶನ ಪಡೆಯಲಾಗಿದೆ. ನಗರದ ಕೋಟೆ ಭಾಗದ ರಸ್ತೆ ಅಗಲೀಕರಣ ಕಾಮಗಾರಿ 4.95 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದ್ದು ಶೀಘ್ರವೇ ಮುಗಿಯಲಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net