ಕೈ ಕಾರ್ಯಕರ್ತರಿಂದ ಮಳೆ ಹಾನಿ ಸರ್ವೇ

RAIN
ಮಳೆ ಮತ್ತು ಗಾಳಿಯಿಂದ ಹಾನಿಗೊಳಗಾದ ತಾಲೂಕಿನ ಢಣಾಪುರದ ಭತ್ತದ ಬೆಳೆಯನ್ನು ಕಾಂಗ್ರೆಸ್ ಕಾರ್ಯಕರ್ತರನ್ನೊಳಗೊಂಡ ರೈತರ ತಂಡ ಗುರುವಾರ ಪರಿಶೀಲಿಸಿತು. ಎಪಿಎಂಸಿ ಮಾಜಿ ಸದಸ್ಯ ರೆಡ್ಡಿ ಶ್ರೀನಿವಾಸ, ಕಂದಾಯ ನಿರೀಕ್ಷಕ ರಾಘವೇಂದ್ರ, ವಿಎ ರಾಜು, ಕೃಷಿ ಸಹಾಯಕ ಅಧಿಕಾರಿ ಅಶೋಕ, ರೈತರಾದ ವೀರಪ್ಪ, ಅಮರೇಶಸ್ವಾಮಿ ಇತರರಿದ್ದರು.
Published on

ಗಂಗಾವತಿ: ಮಳೆ ಮತ್ತು ಗಾಳಿಯಿಂದ ಹಾನಿಗೊಳಗಾದ ಕೊಯ್ಲು ಹಂತಕ್ಕೆ ಬಂದ ಭತ್ತದ ಬೆಳೆಗಳ ಸರ್ವೇ ಕಾರ್ಯ ಕೈಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತರನ್ನೊಳಗೊಂಡ ರೈತರ ತಂಡ ಸೂಕ್ತ ಪರಿಹಾರಕ್ಕಾಗಿ ಗುರುವಾರ ಸರ್ಕಾರವನ್ನು ಒತ್ತಾಯಿಸಿದೆ.

ಕಳೆದೆರೆಡು ದಿನಗಳಿಂದ ಸುರಿದ ಮಳೆ ಮತ್ತು ಗಾಳಿಯಿಂದ ಅಂದಾಜು 800 ಎಕರೆ ಭತ್ತದ ಬೆಳೆ ಹಾನಿಯಾಗಿದೆ. ಕೃಷಿ ಮತ್ತು ಕಂದಾಯ ಅಧಿಕಾರಿಗಳನ್ನೊಳಗೊಂಡ ಕಾಂಗ್ರೆಸ್ ಕಾರ್ಯಕರ್ತರ ತಂಡ, ತಾಲೂಕಿನ ಜಂಗಮರಕಲ್ಗುಡಿ, ಶ್ರೀರಾಮನಗರ, ಢಣಾಪುರ, ಹೊಸ್ಕೇರಾ, ಹೊಸ್ಕೇರಾ ಡಗ್ಗಿ ವ್ಯಾಪ್ತಿಯಲ್ಲಿ ಸಂಚರಿಸಿ ಹಾನಿ ಪ್ರಮಾಣ ಪರಿಶೀಲಿಸಿತಲ್ಲದೇ, ವಾಸ್ತವ ಸರ್ವೇ ಕೈಗೊಳ್ಳುವಂತೆ ಕಂದಾಯ ಸಿಬ್ಬಂದಿಗೆ ಸೂಚಿಸಿತು.

ಕಾವೇರಿ ಸೋನಾ, ಆರ್‌ಎನ್‌ಆರ್ ತಳಿಗಳ ಬೆಳೆಗಳಿಗೆ ಹೆಚ್ಚಿನ ಹಾನಿಯಾಗಿದ್ದು, ನೆಲಕ್ಕೊರಗಿದ ಭತ್ತದ ಫಸಲು ಮೊಳಕೆ ಒಡೆಯುವ ಸಾಧ್ಯತೆಗಳಿವೆ.
ಈ ಬಗ್ಗೆ ಎಪಿಎಂಸಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಗ್ರಾಮೀಣ ಬ್ಲಾಕ್ ಮಾಜಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಮಾತನಾಡಿ, ಕಳೆದೆರೆಡು ದಿನಗಳಿಂದ ಸುರಿದ ಭಾರಿ ಮಳೆ ಮತ್ತು ಗಾಳಿಗೆ ಬಹಳಷ್ಟು ಬೆಳೆ ಹಾನಿಗೊಳಗಾಗಿವೆ. 2ನೇ ಬೆಳೆಗೆ ನೀರಿಲ್ಲದ ಸಂದರ್ಭದಲ್ಲಿ ಮೊದಲನೇ ಬೆಳೆಯೂ ಕೈಕೊಟ್ಟಿದ್ದು ರೈತರಿಗೆ ಸಂಕಷ್ಟವಾಗಿದೆ.

ಸರ್ಕಾರದ ಗಮನಕ್ಕೆ ತರಲು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೂಚನೆಯಂತೆ ಸರ್ವೇ ಕೈಗೊಂಡಿದ್ದು, ಕನಿಷ್ಠ ಎಕರೆಗೆ 30ಸಾವಿರ ರೂ. ಪರಿಹಾರ ೋಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತಿದ್ದು, ಸ್ಪಂದಿಸುವ ಸಾಧ್ಯತೆಗಳಿವೆ. ತೇವಾಂಶ ನೆಪದಲ್ಲಿ ಭತ್ತದ ಬೆಲೆ ಕುಸಿಯದಂತೆ ಸರ್ಕಾರ ಎಚ್ಚರ ವಹಿಸಬೇಕಿದೆ ಎಂದರು. ಕಂದಾಯ ನಿರೀಕ್ಷಕ ರಾಘವೇಂದ್ರ, ವಿಎ ರಾಜು, ಕೃಷಿ ಸಹಾಯಕ ಅಧಿಕಾರಿ ಅಶೋಕ, ರೈತರಾದ ವೀರಪ್ಪ, ಅಮರೇಶಸ್ವಾಮಿ, ಸಿದ್ದರಾಮಯ್ಯಸ್ವಾಮಿ, ಕೃಷ್ಣ, ಕಾಂತರಾವ್, ಧನಂಜಯ ಇತರರಿದ್ದರು.

ಬೆಲೆ ಕುಸಿತ ಆತಂಕ

ಪ್ರಸ್ತುತ ಕ್ವಿಂಟಾಲ್ ಭತ್ತಕ್ಕೆ 2200 ರೂ. ನಿಗದಿಯಾಗಿದ್ದರೂ ತೇವಾಂಶ (ಮೊಯಿಶ್ಚರ್) ಪ್ರಮಾಣ ನೆಪದಲ್ಲಿ ಖರೀದಿದಾರರು ಮತ್ತು ದಲ್ಲಾಳಿಗಳು ದರ ಇಳಿಕೆಗೆ ಹುನ್ನಾರ ನಡೆಸಿದ್ದಾರೆ. ಕಡಿಮೆ ದರಕ್ಕೆ ನೀಡಿ ಇಲ್ಲವೇ, ಭತ್ತ ಒಣಗಿಸಿಕೊಂಡು ಬನ್ನಿ ಎಂದು ಖರೀದಿದಾರರು ಹೇಳುತ್ತಿರುವುದು ರೈತರಿಗೆ ನುಂಗಲಾರದ ತುಪ್ಪವಾಗಿದೆ. ರಾಜ್ಯ ಹೆದ್ದಾರಿಯಲ್ಲಿ ಒಣಗಿಸಬೇಕಿದ್ದು, ಮಳೆಯಿಂದ ಭತ್ತ ಒಣಗುತ್ತಿಲ್ಲ. ಸಾಲ ಮಾಡಿ ಭತ್ತ ಬೆಳೆದ ರೈತರು ಮತ್ತೊಮ್ಮೆ ಸಂಕಷ್ಟಕ್ಕೊಳಗಾಗಿದ್ದು, ಜಲಾಶಯದಲ್ಲಿ ನೀರಿಲ್ಲದಿದ್ದರಿಂದ ಎರಡನೇ ಬೆಳೆ ಸಾಧ್ಯವಿಲ್ಲ. ಮೊದಲ ಬೆಳೆಯ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ಮತ್ತು ಗಾಳಿ ಆತಂಕ ಸೃಷ್ಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net