ನಾರಾಯಣಗೌಡ ಸಾಮಾನ್ಯಜ್ಞಾನವಿಲ್ಲದ ಮಂತ್ರಿ ಎಂದ ಶಾಸಕ

20 NMG 02 (1)
Published on

ಮಂಡ್ಯ: ರಾಜ್ಯ ಸರ್ಕಾರದಲ್ಲಿ ನಾನು ಏನಾಗಿದ್ದೇನೆ ಎಂಬ ಪರಿಜ್ಞಾನವೇ ಇಲ್ಲದೆ ತಮ್ಮದೇ ಸರ್ಕಾರದ ಯೋಜನೆಗಳನ್ನು ಟೀಕಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡರಿಗೆ ಕಾಮನ್‌ಸೆನ್ಸ್ ಇಲ್ಲ ಎಂದು ಶಾಸಕ ಸುರೇಶ್‌ಗೌಡ ಟೀಕಿಸಿದರು. ನಾಗಮಂಗಲ ತಾಲೂಕಿನ ಪಿ.ನೇರಲಕೆರೆ ಗ್ರಾಮದಲ್ಲಿ ನಡೆಯುತ್ತಿರುವ ಪಿಎಂಜಿಎಸ್‌ವೈ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ತಾಲೂಕಿನ ಬೆಳ್ಳೂರು ಹೋಬಳಿ ವ್ಯಾಪ್ತಿಯಲ್ಲಿ ಕೈಗಾರಿಕೆ ಸ್ಥಾಪನೆಗಾಗಿ ಮಾಡಲಾಗಿರುವ ಭೂಸ್ವಾಧೀನ ಪ್ರಕ್ರಿಯೆ ವಿಚಾರವಾಗಿ ನ.18 ರಂದು ಬೆಂಗಳೂರಿನಲ್ಲಿ ಸಚಿವ ನಾರಾಯಣಗೌಡ ನೀಡಲಾಗಿದ್ದ ಹೇಳಿಕೆಗೆ ತಿರುಗೇಟು ನೀಡಿದರು. ತಮ್ಮದೇ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಯೋಜನೆಯ ಬಗ್ಗೆ ಟೀಕಿಸುತ್ತಿರುವ ನಾರಾಯಣಗೌಡ, ಅದೇ ಸರ್ಕಾರದಲ್ಲಿ ಯಾವ ಸ್ಥಾನದಲ್ಲಿದ್ದೇನೆ ಎಂಬುದನ್ನು ಅರಿತು ಟೀಕಿಸುವಷ್ಟು ಪರಿಜ್ಞಾನವು ಇಲ್ಲದಂತೆ ಮಾಧ್ಯಮಗಳ ಮುಂದೆ ಹಾಗೂ ರೈತರ ಮುಂದೆ ಹೇಳಿಕೆ ನೀಡಿದ್ದಾರೆ. ಕೈಗಾರಿಕೆ ಸ್ಥಾಪನೆ ಯೋಜನೆಯನ್ನು ಕೈಬಿಡಲು ಸಿಎಂ ಜತೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ. ಆಗಾದರೇ ಅವರದೇ ಸರ್ಕಾರದ ಕೈಗಾರಿಕೆ ಸಚಿವರ ಗಮನಕ್ಕೆ ಬಾರದೆ ಭೂಸ್ವಾಧೀನವಾಗಿದೆಯೇ ಅಥವಾ ನಾರಾಯಣಗೌಡರು ಕೈಗಾರಿಕೆ ಸಚಿವರಾದರೇ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net