

ಕೋಲಾರ : ತಮ್ಮ ವಿರುದ್ಧ ಸಂಸದ ಎಸ್.ಮುನಿಸ್ವಾಮಿ ಸೇರಿ ಬಿಜೆಪಿಗರು ಸಲ್ಲಿಸಿರುವ ಚಾರ್ಜ್‌ಶೀಟ್ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಕುತ್ತು ಬರಬಹುದೆಂದು ಕಂಗಾಲಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಮೂರು ದಿನಗಳ ಹಿಂದೆಯೇ ಕುಟುಂಬ ಸಮೇತ ತಿರುಮಲದ ತಿಮ್ಮಪ್ಪನ ಮೊರೆ ಹೋಗಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಮುಳಬಾಗಿಲು ಕ್ಷೇತ್ರ ಸೇರಿ ಜಿಲ್ಲೆಯ ಇನ್ನಿತರ ಕಡೆ ಬಿಜೆಪಿ ಕಾರ್ಯಕರ್ತರ ಬೇಡಿಕೆ ಕಡೆಗಣಿಸಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಮಣೆ ಹಾಕಿದ್ದಾರೆ. ರಾಜಕಾರಣಿಯಂತೆ ವರ್ತಿಸದೆ ಅಧಿಕಾರಿಯಂತೆ ಕೆಲಸ ನಿರ್ವಹಿಸುತ್ತಿದ್ದಾರೆ, ಸ್ಥಳೀಯ ಸಂಸ್ಥೆ ಹಾಗೂ ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಬೆಂಬಲಿಸದೆ ವಿರೋಧ ಪಕ್ಷದವರಿಗೆ ಅನುಕೂಲ ಮಾಡಿದ್ದಾರೆಂಬ ದೂರು ಬಿಜೆಪಿ ವರಿಷ್ಠರಿಗೆ ಹೋಗಿರುವುದರಿಂದ ಸಂಪುಟದಿಂದ ತೆಗೆಯಬಹುದು, ಇಲ್ಲವೇ ತಮ್ಮನ್ನು ಡಮ್ಮಿ ಮಾಡಬಹುದೆಂಬ ಭಯದಿಂದ ದೇವರ ದರ್ಶನ ಪಡೆದಿದ್ದಾರೆ ಎನ್ನಲಾಗಿದೆ.
2018ರ ವಿಧಾನಸಭಾ ಚುನಾವಣೆಗೆ ಮುಳಬಾಗಿಲು ಕ್ಷೇತ್ರದಿಂದ ಸ್ಪರ್ಧಿಸಲು ಕಾನೂನು ತೊಡಕಿನಿಂದ ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ಗೆ ಅವಕಾಶ ಸಿಗಲಿಲ್ಲ. ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಪುತ್ರಿ ನಂದಿನಿ ಸ್ಪರ್ಧೆಗೆ ಪ್ರಬಲ ವಿರೋಧ ವ್ಯಕ್ತವಾಗಿತ್ತು, ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಕಣದಲ್ಲಿ ಇಲ್ಲದಿದ್ದರಿಂದ ಎಚ್.ನಾಗೇಶ್ ಅವರನ್ನು ಕರೆತಂದು ಪಕ್ಷೇತರರಾಗಿ ಕಣಕ್ಕೆ ಇಳಿಸಲಾಯಿತು.
ಡಿಕೆಶಿಯಿಂದ ಸಮ್ಮಿಶ್ರ ಪಾಲು: ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಮನವಿ ಮೇರೆಗೆ ಕೊತ್ತೂರು ಮಂಜುನಾಥ್, ನಾಗೇಶ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಯಾವುದೇ ಪಕ್ಷಕ್ಕೂ ಬಹುಮತ ಸಿಗುವುದಿಲ್ಲವೆಂಬ ಸುಳಿವು ಸಿಕ್ಕೊಡನೆ ಡಿಕೆಶಿ ಕೋಲಾರಕ್ಕೆ ಬಂದು ಫಲಿತಾಂಶ ಘೋಷಣೆಗೆ ಮುನ್ನವೇ ನಾಗೇಶ್ ಅವರನ್ನು ಕರೆದೊಯ್ದು ಸಮ್ಮಿಶ್ರ ಸರ್ಕಾರದಲ್ಲಿ ತಡವಾದರೂ ಸಚಿವ ಸ್ಥಾನಕ್ಕೆ ಅವಕಾಶ ಮಾಡಿಕೊಟ್ಟರು. ಸಮ್ಮಿಶ್ರ ಸರ್ಕಾರ ಪತನಕ್ಕೆ 2 ತಿಂಗಳು ಇರುವಂತೆ ನಾಗೇಶ್‌ಗೆ ಸಚಿವ ಸ್ಥಾನವೂ ಸಿಕ್ಕಿತು. ಆದರೆ ಸರ್ಕಾರ ಉಳಿಯದು ಎಂಬುದು ಗೊತ್ತಾಗಿ ಬಿಜೆಪಿ ಟೀಮ್ ಸೇರಿ ಅಬಕಾರಿ ಸಚಿವರಾಗಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನೂ ಗಿಟ್ಟಿಸಿಕೊಂಡರು.
ಚಾರ್ಜ್‌ಶೀಟ್: ತಮ್ಮಿಂದ ಗೆದ್ದ ನಾಗೇಶ್ ವಿರೋಧಿಗಳಿಗೆ ಮಣೆ ಹಾಕುತ್ತಿದ್ದಾರೆ, ಸರ್ಕಾರಿ ನಾಮಿನಿಗಳನ್ನು ಬಿಜೆಪಿ ಮತ್ತು ಬೆಂಬಲಿಗರಿಗೆ ಕೊಡಿಸದೆ ಕಾಂಗ್ರೆಸ್, ಜೆಡಿಎಸ್ ನವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆಂದು ಕೊತ್ತೂರು ಮಂಜುನಾಥ್ ರೆಬಲ್ ಆಗಲು ಪ್ರಾರಂಭಿಸಿದರು, ಇದಕ್ಕೆ ಸಂಸದ ಎಸ್.ಮುನಿಸ್ವಾಮಿ ಧ್ವನಿಗೂಡಿಸಿದರು. ವಿರೋಧಿಗಳನ್ನು ಮಟ್ಟ ಹಾಕಲು ನಾಗೇಶ್ ತಮ್ಮದೇ ದಾರಿ ಹುಡುಕಿಕೊಂಡಿದ್ದರಿಂದ ಹೆಜ್ಜೆ ಹಜ್ಜೆಗೂ ಟೀಕೆ ಎದುರಿಸುವಂತಾಯಿತು. ಬಿಜೆಪಿ ಸ್ಥಳೀಯ ಮುಖಂಡರು ಕೆಲ ದಿನಗಳ ಹಿಂದೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಅವರನ್ನು ಭೇಟಿಯಾಗಿ ನಾಗೇಶ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದು, ನಾಗೇಶ್‌ಗೆ ಬುಲಾವ್ ನೀಡಿ ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡಿದ್ದರೆನ್ನಲಾಗಿದೆ. ನೀವು ಸಚಿವರಾಗಲು ಬಿಜೆಪಿ ಕಾರಣ, ಪಕ್ಷದ ಸಿದ್ಧಾಂತ ಪಾಲಿಸುತ್ತಿಲ್ಲ, ಕಾರ್ಯಕರ್ತರನ್ನು ಗಮನಿಸುತ್ತಿಲ್ಲ, ನಮ್ಮ ಕಾರ್ಯಕರ್ತರು ನಿಮ್ಮ ಬಳಿ ಬಂದರೆ ಕ್ಷೇತ್ರದಲ್ಲಿ ಬಿಜೆಪಿ ಎಲ್ಲಿದೆ ಎಂದು ಲಘುವಾಗಿ ಮಾತನಾಡಿದ್ದೀರಾ, ನಿಮ್ಮ ವಿರುದ್ಧ ವರಿಷ್ಠರಿಗೆ ದೂರು ನೀಡುವೆ ಎಂದು ಬೆವರಿಳಿಸಿದ್ದರೆನ್ನಲಾಗಿದೆ.
ಸಂಕಟ ಬಂದಾಗ ವೆಂಕಟರಮಣ: ಆರೋಪಗಳಿಂದ ಬೆಚ್ಚಿಬಿದ್ದಿದ್ದ ನಾಗೇಶ್ ಆಪ್ತರಲ್ಲಿ ಅಳಲು ತೋಡಿಕೊಂಡಾಗ ಮುಖಂಡರೊಬ್ಬರು ‘ಸಂಕಟ ಬಂದಾಗ ವೆಂಕಟರಮಣ‘ ಅನ್ನೋ ಹಾಗೆ ಆದಷ್ಟು ಬೇಗನೆ ತಿರುಮಲ ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಪಡೆದು ಬನ್ನಿ ಎಂದು ಸಲಹೆ ನೀಡಿದ್ದರಂತೆ. ಜ.8ರಂದು ಕುಟುಂಬ ಸಮೇತ ತೆರಳಿ ದರ್ಶನ ಪಡೆದು ಬಂದು ಸಂಪುಟದಲ್ಲಿ ಉಳಿಯಲು ಮಾರ್ಗತೋರುವಂತೆ ಆಪ್ತರೊಂದಿಗೆ ಕೇಳಿಕೊಂಡಿದ್ದಾರೆನ್ನಲಾಗಿದೆ.
ಯಾರಿಗೆ ಇವರ ಸ್ಥಾನ?: ಒಂದು ವೇಳೆ ನಾಗೇಶ್ ಅವರನ್ನು ಸಂಪುಟದಿಂದ ಕೈಬಿಟ್ಟಲ್ಲಿ ಅವರ ಸ್ಥಾನ ಕೊಳ್ಳೆಗಾಲ ಶಾಸಕ ಬಿಎಸ್‌ಪಿ ಮಹೇಶ್ ಅವರಿಗೆ ಸಿಗಬಹುದೆಂಬ ಗುಸುಗುಸು ಕೇಳಿ ಬರುತ್ತಿದೆ, ಮಹೇಶ್ ಅವರನ್ನು ಬಿಜೆಪಿಗೆ ಸೆಳೆಯಲು ಕಳೆದೊಂದು ವರ್ಷದಿಂದ ಪ್ರಯತ್ನ ನಡೆಯುತ್ತಿದ್ದು, ಒಪ್ಪಿದಲ್ಲಿ ಸಚಿವ ಸ್ಥಾನ ನೀಡಿ ನಾಗೇಶ್‌ಗೆ ಯಾವುದಾದರೊಂದು ಪ್ರಮುಖ ಹುದ್ದೆ ನೀಡಿ ಸಮಾಧಾನ ಪಡಿಸಬಹುದೆನ್ನಲಾಗಿದೆ.
ನಾಗೇಶ್ ಸುರಕ್ಷಿತ? : ಈ ಹಿಂದೆ ಪಕ್ಷೇತರರನ್ನು ಸಚಿವ ಸಂಪುಟದಿಂದ ಕೈಬಿಟ್ಟಾಗ ಆಗಿರುವ ಸಮಸ್ಯೆ ನಮ್ಮ ಪಕ್ಷದ ವರಿಷ್ಠರಿಗೆ ಅರಿವಿದೆ, ನಾಗೇಶ್ ಅವರನ್ನು ಕೈಬಿಡುವುದಿಲ್ಲವೆಂಬ ವಿಶ್ವಾಸವಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ. ವರ್ಗಾವಣೆ ಇನ್ನಿತರ ವಿಚಾರದಲ್ಲಿ ನಾಗೇಶ್ ಮತ್ತು ಮುನಿಸ್ವಾಮಿ ನಡುವೆ ಶೀತಲ ಸಮರ ಪ್ರಾರಂಭವಾಗಿ ಅನೇಕ ದಿನಗಳಾಗಿದೆ. ಇವರಿಬ್ಬರು ಸರಿ ಹೋಗದಿದ್ದರೆ ಜಿಲ್ಲೆಯಲ್ಲಿ ಬಿಜೆಪಿಗೆ ಉಳಿಗಾಲವಿಲ್ಲ. ಇನ್ನು ಕೊತ್ತೂರು ಮಂಜುನಾಥ್ ಹಾಗೂ ನಾಗೇಶ್ ನಡುವೆ ಇರುವ ಮನಸ್ತಾಪ ಸದ್ಯಕ್ಕೆ ಸರಿ ಹೋಗುವ ಲಕ್ಷಣ ಕಾಣುತ್ತಿಲ್ಲ, ಒಂದು ವೇಳೆ ಸಂಸದರು ಮತ್ತು ಬಿಜೆಪಿ ವರಿಷ್ಠರು ಮನಸ್ಸು ವಾಡಿದಲ್ಲಿ ಸಮಸ್ಯೆಗೆ ಪರಿಹಾರ ಸಿಗಬಹುದೆಂದು ಅಭಿಪ್ರಾಯಿಸಿದ್ದಾರೆ.
ಬಿಜೆಪಿ ಸರ್ಕಾರ ರಚನೆಯಲ್ಲಿ ನನ್ನ ಪಾತ್ರ ದೊಡ್ಡದು, ನನ್ನ ಇಲಾಖೆ ಮೂಲಕವೂ ಒಳ್ಳೆಯ ಕೆಲಸ ನಡೆಯುತ್ತಿದೆ. ಸಾಕಷ್ಟು ಸುಧಾರಣಾ ಕ್ರಮ ಕೈಗೊಂಡಿದ್ದೇನೆ. ಮುಖ್ಯಮಂತ್ರಿಗಳು ನನ್ನನ್ನು ಸಂಪುಟದಲ್ಲಿ ಉಳಿದ ಅವಧಿಗೂ ಮುಂದುವರಿಸುತ್ತಾರೆಂಬ ಅಚಲ ವಿಶ್ವಾಸವಿದೆ. ಎಚ್. ನಾಗೇಶ್ ಜಿಲ್ಲಾ ಉಸ್ತುವಾರಿ ಸಚಿವ, ಕೋಲಾರ