

ಮಂಡ್ಯ: ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯನ್ನು ನೋಡಿದರೆ ದೇಶದಲ್ಲಿ ಕಳಪೆ ಕಾಮಗಾರಿ ಎನ್ನಿಸುತ್ತದೆ. ಮಾತ್ರವಲ್ಲದೆ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿಯೂ ಕೋಟ್ಯಂತರ ರೂ ಅವ್ಯವಹಾರ ನಡೆದಿರುವ ಆರೋಪವಿದೆ. ಆದ್ದರಿಂದ ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಒತ್ತಾಯಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಬೆ-ಮೈ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ಎನ್ನುವುದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಅಗತ್ಯವಾಗಿರುವ ಯಾವುದೇ ಸೌಲಭ್ಯವೂ ಇಲ್ಲ. ಕನಿಷ್ಟ ಈ ಮಾರ್ಗದಲ್ಲಿ ಶೌಚಗೃಹವೂ ಇಲ್ಲದಿರುವುದು ದುರಂತ. ದೇಶದ ಹಲವಾರು ರಾಷ್ಟ್ರೀಯ ಹೆದ್ದಾರಿಗಳನ್ನು ನೋಡಿದ್ದೇನೆ. ಆದರೆ ಇಷ್ಟೊಂದು ಕಳಪೆಯಾಗಿರುವುದು ಯಾವುದೂ ಇಲ್ಲ ಎಂದು ಟೀಕಿಸಿದರು.
ರಸ್ತೆಯಲ್ಲಿ ವೇಗವಾಗಿ ಸಂಚರಿಸುವುದು ಕಷ್ಟ. ಕಾರಣ ರೋಡ್ ಗ್ರಿಪ್ ಕೂಡ ಸರಿಯಲ್ಲ. ನಾಲ್ಕು ಚಕ್ರದ ವಾಹನಗಳು ವೇಗ ಬಂದರೆ ನಿಯಂತ್ರಣ ಮಾಡಲಾಗುವುದಿಲ್ಲ. ಸ್ವಲ್ಪ ಮಳೆ ಬಂದರೂ ಹೆದ್ದಾರಿ ಹಾಗೂ ಅಂಡರ್‌ಪಾಸ್‌ನಲ್ಲಿ ನಿಲ್ಲುತ್ತದೆ. ಎಲ್ಲಿಯೂ ಸರಿಯಾಗಿ ನಾಮಫಲಕ ಹಾಕಿಲ್ಲ. ಒತ್ತಾಯಕ್ಕೆ ಮಣಿದು ಎಂಟ್ರಿ, ಎಕ್ಸಿಟ್ ಮಾಡಿದ್ದಾರೆಯೇ ಹೊರತು ಅದು ಕೂಡ ಸರಿಯಾಗಿಲ್ಲ. ಆಂಬುಲೆನ್ಸ್‌ನ ವ್ಯವಸ್ಥೆಯೂ ಇಲ್ಲ. ಒಟ್ಟಾರೆ ಎಕ್ಸ್‌ಪ್ರೆಸ್ ಕಾರಿಡಾರ್ ಎನ್ನುವ ಹೆಸರಿಗೆ ಕಳಂಕಪ್ರಾಯವಾಗಿದೆ. ಹೆದ್ದಾರಿಯಲ್ಲಿ ಓಡಾಡುವುದು ಎಷ್ಟು ಆತಂಕಕಾರಿಯೋ ಅಷ್ಟೇ ಪ್ರಮಾಣದಲ್ಲಿ ಕೆಳ ಸೇತುವೆ ಮತ್ತು ಸರ್ವೀಸ್ ರಸ್ತೆಗಳಲ್ಲೂ ಸಮಸ್ಯೆ ಕಂಡುಬರುತ್ತಿದೆ. ಇದರಲ್ಲಿ ಅಧಿಕಾರಿಗಳ ಪಾಲೂ ಇದೆ. ಸಾರ್ವಜನಿಕರ ಸುರಕ್ಷತೆಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇನ್ನು ಕಾಮಗಾರಿಗೆಂದು ಮಾಡಿರುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸಾಕಷ್ಟು ಅವ್ಯವಹಾರಗಳಾಗಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ರಸ್ತೆ ಕಾಮಗಾರಿ ಪೂರ್ಣವಾಗದಿದ್ದರೂ ಸಹ ಕೇವಲ ರಾಜಕೀಯಕ್ಕಾಗಿ ರಸ್ತೆಯನ್ನು ಲೋಕಾರ್ಪಣೆ ಮಾಡಲಾಯಿತು. ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರು ಪ್ರಾರಂಭದಲ್ಲೇ ಇದನ್ನು ವಿರೋಧಿಸಿದರು. ಆದರೂ ಬಿಜೆಪಿ ಸರ್ಕಾರ ರಸ್ತೆ ಲೋಕಾರ್ಪಣೆ ಮಾಡಿತು. ಈ ರಸ್ತೆಯ ಎಲ್ಲ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮವಾಗಬೇಕು. ಅದಕ್ಕೆ ತಗುಲಿರುವ ಹಣವನ್ನು ಅವರಿಂದಲೇ ಕಟ್ಟಿಸುವಂತಹ ಪ್ರಕ್ರಿಯೆ ಆಗಬೇಕು. ಈ ಬಗ್ಗೆ ನಾವೂ ಸಹ ಒಂದು ಹೆಜ್ಜೆ ಮುಂದೆ ಇಟ್ಟಿದ್ದೇವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಯಾವ ರೀತಿ ತನಿಖೆ ಆಗಬೇಕು ಎಂಬುದರ ಬಗ್ಗೆ ವರದಿ ಪಡೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.