

ಮಂಡ್ಯ: ರೈತರಿಗೆ ಅನುಕೂಲವಾಗುವಂತೆ ಹಗಲಿನಲ್ಲಿಯೇ ಸಾಧ್ಯವಾದಷ್ಟು ತ್ರಿೇಸ್ ವಿದ್ಯುತ್ ಕೊಡಲು ಕ್ರಮ ವಹಿಸಿ ಎಂದು ಸೆಸ್ಕ್ ಅಧಿಕಾರಿಗಳಿಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರದ ಸೂಚನೆ ಇಲ್ಲದಿದ್ದರೂ ಅನಾವಶ್ಯಕವಾಗಿ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತಿದೆ ಎನ್ನುವ ದೂರುಗಳಿವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಅಂತೆಯೇ ರಾತ್ರಿ ಹೊತ್ತು ತ್ರಿೇಸ್ ವಿದ್ಯುತ್ ಕೊಡುವ ಬದಲು ಹಗಲಿನಲ್ಲಿಯೇ ಪೂರೈಕೆ ಮಾಡುವ ಬಗ್ಗೆ ಗಮನಹರಿಸಿ ಎಂದರು.
ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಮಳವಳ್ಳಿ ತಾಲೂಕಿನಲ್ಲಿ ವಿದ್ಯುತ್‌ಗೆ ಸಂಬಂಧಿಸಿದ ಸಾಕಷ್ಟು ದೂರುಗಳಿವೆ. ಪ್ರಮುಖವಾಗಿ ಟಿಸಿ ಹಾಕಿಕೊಡುವ ವಿಚಾರದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿರುವ ಆರೋಪಗಳಿವೆ. ಈ ಬಗ್ಗೆ ತುರ್ತು ಕ್ರಮ ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸೂಚನೆ ನೀಡಿದರು.
ಸಚಿವ ಮಾತನಾಡಿ, ರೈತರು ಬೆಳೆಯುತ್ತಿರುವ ಬೆಳೆಗಳಿಗೆ ತೊಂದರೆಯಾಗದಂತೆ ಜಿಲ್ಲೆಯ ಕೊನೆಯ ಭಾಗಕ್ಕೂ ನಾಲೆಗಳ ಮೂಲಕ ನೀರು ತಲುಪಿಸುವ ವ್ಯವಸ್ಥೆ ಮಾಡಬೇಕು. ರೈತರಿಗೆ ಬಿತ್ತನೆ ಬೀಜ, ಗೊಬ್ಬರದ ಕೊರತೆ ಉಂಟಾಗದಂತೆ ನೋಡಿಕೊಳ್ಳಿ. ರೈತರು ಮತ್ತು ಸಾರ್ವಜನಿಕರ ಕೆಲಸ ಮಾಡಿಕೊಡಲು ತಾಲೂಕು ಕಚೇರಿಗಳಲ್ಲಿ ಅನಗತ್ಯ ವಿಳಂಭ ಹಾಗೂ ಹಣದ ಬೇಡಿಕೆ ಇಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದೆ. ಸಾರ್ವಜನಿಕರ ಕೆಲಸಕ್ಕೆ ವಿಳಂಬ ಮಾಡುವುದು ಕಂಡುಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಮುಂಗಾರು ಆರಂಭವಾಗಲಿದೆ. ಆದ್ದರಿಂದ ಕೃಷಿ ಇಲಾಖೆ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಿ. ಮಣ್ಣಿನ ಸವಕಳಿಯಾಗದಂತೆ ಲವತ್ತತೆ ಕಾಪಾಡುವ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿ. ನೀರಿನ ಮಿತವ್ಯಯ ಬಳಕೆ ಮೈಕ್ರೋ ಇರಿಗೇಷನ್, ಅಂತರ್ಜಲ ಮರುಪೂರಣದ ಬಗ್ಗೆ ಚಿಂತಿಸಿ ಅನುಷ್ಠಾನಗೊಳಿಸಬೇಕಿದೆ. ಮುಂದಿನ ತಿಂಗಳು ರಾಜ್ಯ ಬಜೆಟ್ ಮಂಡನೆಯಾಗಲಿದೆ. ಹೊಸ ಯೋಜನೆಗಳನ್ನು ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಿ. ಬಜೆಟ್ ಮೂಲಕ ಅಭಿವೃದ್ದಿ ಯೋಜನೆಗಳಿಗೆ ಅಗತ್ಯ ಅನುದಾನ ತರುವ ಪ್ರಯತ್ನಕ್ಕೆ ಅಧಿಕಾರಿಗಳು ಸಹಕಾರ ನೀಡುವಂತೆ ಸಲಹೆ ನೀಡಿದರು.
ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಮಂಡ್ಯ ಕೃಷಿ ಪ್ರಧಾನ ಜಿಲ್ಲೆ. ಮುಂಗಾರು ಮಳೆ ಆರಂಭವಾಗಲಿದೆ. ರೈತರಿಗೆ ಅಗತ್ಯವಾಗಿರುವ ರಾಸಾಯನಿಕ ಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಎಲ್ಲವನ್ನೂ ಶೇಖರಣೆ ಮಾಡಿ ಇಟ್ಟುಕೊಳ್ಳಿ ಎಂದರು.
ಅರ್ಹರಿಗೆ ತಲುಪಲಿ: ಎನ್.ಚಲುವರಾಯಸ್ವಾಮಿ ಮಾತನಾಡಿ, ರಾಜ್ಯಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಣೆ ಹಾಗೂ ಸೂಚನೆಗಳನ್ನು ನಿಗದಿತ ಸಮಯದಲ್ಲಿ ಅಧಿಕಾರಿಗಳು ಸರ್ಕಾರಕ್ಕೆ ಒದಗಿಸಬೇಕಾಗುತ್ತದೆ. ಅದಕ್ಕೆ ಅಗತ್ಯ ಸಿದ್ಧತೆ ಮತ್ತು ತಂಡಗಳನ್ನು ಮಾಡಿಕೊಂಡು ಸೌಲಭ್ಯದಿಂದ ಅರ್ಹ ಲಾನುಭವಿಗಳು ವಂಚಿತರಾಗದಂತೆ ನೋಡಿಕೊಳ್ಳಿ ಎಂದರು.
ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ತೊಂದರೆಗಳಿದ್ದಲ್ಲಿ ಶಾಸಕರ ಗಮನಕ್ಕೆ ತನ್ನಿ. ಜನಪರ ಹೊಸ ಯೋಜನೆಗಳನ್ನು ರೂಪಿಸಿ ಹಂತ ಹಂತವಾಗಿ ಜಾರಿಗೆ ತರಲಾಗುವುದು. ಜಿಲ್ಲೆಯ ಬಹಳಷ್ಟು ರಸ್ತೆಗಳು ಗುಂಡಿಗಳಿಂದ ಕೂಡಿದೆ. ಇಂತಹ ಸಮಸ್ಯೆಗಳಿಗೆ ಕೂಡಲೇ ಯೋಜನೆ ರೂಪಿಸಿ ರಸ್ತೆಗಳ ಅಭಿವೃದ್ದಿಗೆ ಆದ್ಯತೆ ನೀಡುವಂತೆ ಸೂಚಿಸಿದ ಅವರು, ಜಿಲ್ಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಮೈಷುಗರ್ ಕಾರ್ಖಾನೆ ಕಾರ್ಯಾರಂಭಕ್ಕೆ ರಾಜ್ಯಸರ್ಕಾರ 50 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ಕೆಲಸ ನಿರ್ವಹಿಸಿ. ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಾಗುವುದು. ಇದಕ್ಕೆ ಬೇಕಿರುವ ಪೂರಕ ಮಾಹಿತಿಯನ್ನು ಸಿದ್ಧಮಾಡಿಕೊಳ್ಳಿ ಎಂದರು.
ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ಸರ್ವೆ ಇಲಾಖೆಯಲ್ಲಿ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಖಾತೆಗಳು, ಪೋಡಿ ಮುಂತಾದ ಕೆಲಸಗಳನ್ನು ವೇಗವಾಗಿ ಜನರಿಗೆ ಮಾಡಿಕೊಡಬೇಕು. ಮಿಮ್ಸ್ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಕ್ಕೆ ಸಂಬಂಧಿಸಿದಂತೆ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದರು. ಸಚಿವರು ದನಿಗೂಡಿಸಿ, ಮಿಮ್ಸ್ ಬಗ್ಗೆ ಚರ್ಚಿಸಲು ಪ್ರತ್ಯೇಕ ಸಭೆ ಮಾಡಲಾಗುವುದು ಎಂದರು. ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಅವುಗಳ ಬಗ್ಗೆ ಚರ್ಚಿಸಲು ಪ್ರತ್ಯೇಕ ಸಭೆ ನಡೆಸಬೇಕು ಎಂದು ಸಲಹೆ ಮಾಡಿದರು. ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಜಿಲ್ಲೆಯ ಸ್ಥಿತಿ ಗತಿ ಹಾಗೂ ಮಳೆ ಹಾನಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಪರಿಹಾರ ಕ್ರಮಗಳ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಶಾಸಕ ರವಿಕುಮಾರ್ ಗಣಿಗ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವಿರ್ ಆಸ್ಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಂಜೀವಪ್ಪ ಇತರರಿದ್ದರು.