

ಮಂಡ್ಯ: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಕೇಂದ್ರ ಬಿಜೆಪಿ ಸರ್ಕಾರ ಅಡ್ಡಿಯುಂಟು ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇಂತಹ ನೀಚ ಕೆಲಸಕ್ಕೆ ಇಳಿಯಬಾರದು. ರಾಜ್ಯಕ್ಕೆ ಅಕ್ಕಿ ಕೊಡುವ ವಿಚಾರದಲ್ಲಿ ನಿರಾಕರಣೆ ಮಾಡಿದೆ. ಮೊದಲು ಅಕ್ಕಿ ಕೊಡುತ್ತೇವೆಂದು ಹೇಳಿದವರು ಬಳಿಕ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಕೊಡಲ್ಲ ಎನ್ನುತ್ತಿದ್ದಾರೆ. ಇದು ಅನ್ಯಾಯ ಅಲ್ವಾ?. ನಾವು ಹಣ ಕೊಟ್ಟರೂ ಶೇಖರಣೆ ಇರುವ ಅಕ್ಕಿ ಕೊಡುವುದಕ್ಕೆ ಏನು?. ರಾಜ್ಯಕ್ಕೆ ಬೇಕಾಗುವ ಸೌಲಭ್ಯ ಒದಗಿಸುವ ಜವಾಬ್ದಾರಿ ಅವರದ್ದು. ಆದರೆ ಕೊಡುವ ಅಕ್ಕಿಯನ್ನು ನಿಲ್ಲಿಸುತ್ತಿದ್ದಾರೆ. ಇದು ದುರುದ್ದೇಶ ರಾಜಕಾರಣ. ಹರಿಯಾಣದಿಂದ ಅಕ್ಕಿ ಕೊಡಲು ಒಪ್ಪಿದ್ದಾರೆ, ಎಷ್ಟು ಸಾಧ್ಯವೋ ಅಷ್ಟು ವ್ಯವಸ್ಥೆ ಮಾಡುತ್ತೇವೆ. ಆಂಧ್ರ, ತೆಲಂಗಾಣ ದೂರ ಇದ್ದರೂ ಏನೇ ಕಷ್ಟ ಆದರೂ ಅಕ್ಕಿ ಕೊಡುತ್ತೇವೆ ಎಂದರು.
ಬಿಜೆಪಿಗೆ ಕಾಂಗ್ರೆಸ್ ಪಕ್ಷದ ಭಯ ಶುರುವಾಗಿದೆ. ಅದಕ್ಕಾಗಿ ನಮ್ಮ ಪಕ್ಷದ ಕಾರ್ಯಕ್ರಮಗಳಿಗೆ ತಡೆ ಮಾಡುತ್ತಿದ್ದಾರೆ. ಅಕ್ಕಿ ಬದಲು ರಾಗಿ, ಜೋಳ ಕೊಡಿ ಎಂಬ ಬಿಜೆಪಿ ನಾಯಕರ ಹೇಳುತ್ತಾರೆ. ಅವರು ಯಾರು ಹೇಳೋಕೆ. ನಮ್ಮ ತೀರ್ಮಾನ ನಮಗೆ ಬಿಟ್ಟಿದ್ದು. ಅವರು ಐದು ವರ್ಷ ಇದ್ದರು. ಈ ಯೋಜನೆ ಮಾಡಬೇಡಿ ಎಂದು ಹೇಳಿದ್ವಾ?. ಕೇಂದ್ರ ಸರ್ಕಾರಕ್ಕೆ ಅಕ್ಕಿ ಕೊಡುವ ಅವಕಾಶವಿದೆ, ಕೊಡಿ. ನಾವು ಅಕ್ಕಿಯನ್ನ ಸಾಲ ಕೇಳುತ್ತಿಲ್ಲ. ಹಣ ಕೊಡುತ್ತೇವೆ ಕೊಡಿ. ಲೋಕಸಭಾ ಚುನಾವಣೆಯಲ್ಲಿ ಈ ಯೋಜನೆಗಳು ಕಾಂಗ್ರೆಸ್ ಕೈ ಹಿಡಿಯುತ್ತವೆ. ಬಿಜೆಪಿಯ ಸರ್ಕಾರದ ಹಿಂದಿನ ಡ್ಯಾಮೆಜ್‌ಗಳು ಸಹ ನಮಗೆ ಅನುಕೂಲವಾಗುತ್ತದೆ. ಒಳ್ಳೆಯ ಅಭಿವೃದ್ಧಿ, ಸಧೃಢ ಆಡಳಿತ ಕೊಡುತ್ತೇವೆ. ಸಿದ್ದರಾಮಯ್ಯ ಮತ್ತು ಡಿಕೆಶಿ ನೇತೃತ್ವದಲ್ಲಿ ಒಳ್ಳೆಯ ಆಡಳಿತ ಕೊಡುತ್ತೇವೆ ಎಂದು ಹೇಳಿದರು.
ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದಿಂದ ಅವಾಂತರಗಳ ಸೃಷ್ಟಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಶೀಘ್ರದಲ್ಲಿಯೆ ಬಸ್‌ಗಳ ಸಂಖ್ಯೆ ಹೆಚ್ಚಳ ಮಾಡುತ್ತೇವೆ. ನಾವು ಸಾರಿಗೆ ಮಂತ್ರಿಗಳ ಗಮನಕ್ಕೆ ತರುತ್ತೇವೆ. ಪುರುಷರಿಗೆ ಶೇ.50ರಷ್ಟು ರಿಸರ್ವ್ ಮಾಡಲಾಗಿದೆ. ಆಷಾಢ ಬಂದಿರುವುದರಿಂದ ಮಹಿಳೆಯರು ದೇವಸ್ಥಾನಕ್ಕೆ ಹೆಚ್ಚು ಹೋಗುತಿದ್ದಾರಷ್ಟೇ. ಕೆಲವು ಕಡೆ ಗಲಾಟೆಯಾಗಿದೆ. ಮುಂದೆ ಎಲ್ಲವೂ ಸರಿ ಹೋಗುತ್ತದೆ. ಶೀಘ್ರದಲ್ಲೇ ಸರ್ಕಾರ ಸಮಸ್ಯೆ ಬಗೆಹರಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.