ಹಣೆಬರಹವಿದ್ದರೆ ಶಾಸಕ ರವಿಕುಮಾರ್ ಗಣಿಗ ಮಂತ್ರಿ ಆಗಬಹುದು: ಸಚಿವ ಎನ್.ಚಲುವರಾಯಸ್ವಾಮಿ ಹೀಗಂತ ಹೇಳಿದ್ಯಾಕೆ?

Minister N.Cheluvarayaswamy
Published on

ಮಂಡ್ಯ: ಹಣೆಬರಹ ಇದ್ದರೆ ಯಾರೂ ಏನು ಬೇಕಾದರೂ ಆಗಬಹುದು. ಅದೇ ರೀತಿ ಶಾಸಕ ರವಿಕುಮಾರ್ ಗಣಿಗ ಮಂತ್ರಿ ಆಗಬಹುದೇನೋ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಬಾರಿಗೆ ಶಾಸಕರಾದವರು ಸಿಎಂ ಆಗಿದ್ದಾರೆ. ಅದೇ ರೀತಿ ಹಣೆಬರಹ ಇದ್ದರೆ ರವಿಕುಮಾರ್ ಸಚಿವರಾಗಬಹುದು. ರವಿ ಅವರಿಗೆ ಕೆಲಸ ಮಾಡುವುದರಲ್ಲಿ ಆಸಕ್ತಿ ಇದೆ. ಮೊದಲ ಬಾರಿಗೆ ಶಾಸಕರಾಗಿದ್ದರೂ ಜನಪರ ಕೆಲಸ ಮಾಡುತ್ತಿದ್ದಾರೆ ಎಂದರು.

ಇನ್ನು ಲೋಕಸಭೆ ಚುನಾವಣೆ ಬಳಿಕ ನಾನು ಸಚಿವನಾಗುತ್ತೇನೆಂದು ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಮೊದಲನೇ ಲಿಸ್ಟ್‌ನಲ್ಲಿ ಅವರು ಸಚಿವರಾಗಬೇಕಿತ್ತು. ಎರಡನೇ ಬಾರಿ ಸಂಪುಟ ಮರು ರಚನೆ ವೇಳೆ ಆಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಅದರಲ್ಲಿ ತಪ್ಪೇನಿಲ್ಲ, ಅವರು ಸಚಿವರಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.

ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಮೂವರು ಸಚಿವರಿದ್ದರು. ಈಗ ಇಬ್ಬರು ಏಕೆ ಆಗಬಾರದು. ವಿಜಯಪುರ, ತುಮಕೂರು, ಬೆಳಗಾವಿಯಲ್ಲಿ ಇಬ್ಬರು ಸಚಿವರಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಐದು ಅಥವಾ ಆರು ಕ್ಷೇತ್ರ ಗೆದ್ದರೆ ಇಬ್ಬರಿಗೆ ಅವಕಾಶ ಕೊಡುವುದಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದರು. ಕಾರಣಾಂತರಗಳಿಂದ ಆಗಲಿಲ್ಲ. ಮುಂದೆ ಬೇಗ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net