ನೆನಪಿನಾರ್ಥ ಕನ್ನಡ ಭವನ ನಿರ್ಮಾಣ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಘೋಷಣೆ

Minister N. Chaluvarayaswamy press conference Mandya
Published on

ಮಂಡ್ಯ: ನಗರದ ಹೊರವಲಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಇದರ ನೆನಪಿಗಾಗಿ ಕನ್ನಡ ಭವನ ನಿರ್ಮಾಣ ಮಾಡಲಾಗುವುದು ಎಂದು ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಘೋಷಣೆ ಮಾಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರ ನಿರೀಕ್ಷೆಯನ್ನು ಮೀರಿ ಜನರು ಆಗಮಿಸಿ ನುಡಿಜಾತ್ರೆಯನ್ನು ಯಶಸ್ವಿಗೊಳಿಸಿದ್ದಾರೆ. ಮಂಡ್ಯ ಹಾಗೂ ಕನ್ನಡದ ನಡುವಿನ ಬಾಂಧವ್ಯ, ಪ್ರೀತಿ ಎಂತದ್ದು ಎನ್ನುವುದನ್ನು ಹೊರಗಿನವರಿಗೆ ತೋರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಮ್ಮೇಳನದ ನೆನಪನ್ನು ಶಾಶ್ವತವಾಗಿ ಉಳಿಸುವ ಕೆಲಸವಾಗಬೇಕಿದೆ. ನುಡಿಜಾತ್ರೆಗೆ ಆಗಿರುವ ಖರ್ಚು, ವೆಚ್ಚದ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಅನುದಾನ ಇರಲಿ, ಇಲ್ಲದಿರಲಿ ಸರ್ಕಾದಿಂದ ಹೆಚ್ಚುವರಿ ಹಣವನ್ನು ಹಾಕಿದರೂ ಪರವಾಗಿಲ್ಲ. ಸುಸಜ್ಜಿತವಾದ ಕನ್ನಡ ಭವನ ನಿರ್ಮಾಣ ಮಾಡಲಾಗುವುದು. ಈಗಾಗಲೇ ನಗರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ, ರೈತ ಸಭಾಂಗಣವಿದೆ. ಇದರೊಟ್ಟಿಗೆ ಕನ್ನಡ ಭವನವನ್ನೇ ಪ್ರತ್ಯೇಕವಾಗಿ ನಿರ್ಮಾಣ ಮಾಡಲಾಗುವುದು. ಈ ಸಂಬಂಧ ಜಾಗ ಹುಡುಕುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಸಾಧ್ಯವಾದಷ್ಟು ಬೇಗ ಶಂಕುಸ್ಥಾಪನೆ ನೆರವೇರಿಸಿ ಭವನ ನಿರ್ಮಿಸಲಾಗುವುದು ಎಂದರು.

ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಎಲ್ಲ ಪಕ್ಷದ ಜನಪ್ರತಿನಿಧಿಗಳು, ಅಧಿಕಾರಿಗಳು, ಕಸಾಪ ಮತ್ತು ಸಂಘ ಸಂಸ್ಥೆಗಳ ಹೊಂದಾಣಿಕೆಯಿಂದ ಸಮ್ಮೇಳನ ಯಶಸ್ವಿಯಾಯಿತು. ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಿದ್ಧತೆ ನಡೆಸಿದಾಗ ಅದಕ್ಕಾಗಿ ಯೋಜನೆ ರೂಪಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಮಂಡಿಸಲಾಯಿತು. ನಮ್ಮ ಮನವಿಗೆ ಸ್ಪಂದಿಸಿ ಯಾವುದಕ್ಕೂ ಕೊರತೆಯಾಗದಂತೆ ಎಲ್ಲ ರೀತಿಯ ಸಹಕಾರವನ್ನು ಸರ್ಕಾರದ ವತಿಯಿಂದ ನೀಡಿದರು. ಇದು ನಮಗೆ ಮತ್ತಷ್ಟು ಬಲ ತಂದುಕೊಟ್ಟಿತ್ತು. ಹಲವು ಸಮಿತಿ ರಚಿಸಲಾಗಿತ್ತು. ಎಲ್ಲರೂ ಕೂಡ ಅವರಿಗೆ ವಹಿಸಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಸರ್ಕಾರಿ ನೌಕರರು ಒಂದು ದಿನದ ವೇತನ ನೀಡುವ ಮೂಲಕ ನಮ್ಮ ಜತೆಗೆ ಹೆಜ್ಜೆ ಹಾಕಿದರು ಎಂದು ಹೇಳಿದರು.

ಶಾಸಕ ರಮೇಶ ಬಂಡಿಸಿದ್ದೇಗೌಡ ಅವರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಕೊರತೆಯಾಗದಂತೆ ನಾಡಿನಾದ್ಯಂತ ಬಂದ ಸಾಹಿತ್ಯಾಸಕ್ತರಿಗೆ ಅತಿಥಿ ಸತ್ಕಾರ ಮಾಡಿದ್ದೇವೆ. ರಾಜ್ಯಾದ್ಯಂತ ಪ್ರಚಾರಕ್ಕಾಗಿ ರಥವೊಂದನ್ನು ಸಿದ್ದಪಡಿಸಿ ಕಳುಹಿಸಿದ್ದೆವು. ಅದೇ ರೀತಿ ಜಿಲ್ಲೆಯಲ್ಲೂ ಮತ್ತೊಂದು ರಥ ಸಂಚರಿಸಿತ್ತು. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಅಚ್ಚಕಟ್ಟಾದ ವೇದಿಕೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದರು. ಸಾಹಿತ್ಯ, ಸಂಸ್ಕೃತಿ, ಚಳವಳಿಗಳು, ರಂಗಭೂಮಿ, ಭಾಷಾಭಿವೃದ್ಧಿ, ಮಹಿಳೆ ಸೇರಿದಂತೆ 30ಕ್ಕೂ ಹೆಚ್ಚು ವಿಚಾರಗಳ ವಿವಿಧ ಗೋಷ್ಠಿ ನಡೆದವು. ರಾಜೇಶ್‌ಕೃಷ್ಣನ್ ಸಾಧುಕೋಕಿಲ, ಅರ್ಜುನ್ ಜನ್ಯ ಮತ್ತು ತಂಡದಿಂದ ಎರಡು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ, ಮೂರನೇ ದಿನ ಪೊಲೀಸ್ ಬ್ಯಾಂಡ್ ನುಡಿಸಿರಿ ಎಲ್ಲವೂ ಸಾಹಿತ್ಯಾಸಕ್ತರಿಗೆ ರಸದೌತಣ ನೀಡಿದವು ಎಂದರು.

ಇದಷ್ಟೇ ಅಲ್ಲದೆ, ಡಾ.ಅಂಬೇಡ್ಕರ್ ಭವನ ಮತ್ತು ಕಲಾಮಂದಿರದಲ್ಲೂ ಸ್ಥಳೀಯ ಕಲಾವಿದರಿಗೆ ತಮ್ಮ ಕಲಾ ಪ್ರದರ್ಶನ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ನೃತ್ಯ, ನಾಟಕಗಳು ಸಹ ಮೇಳೈಸಿದವು. ಒಟ್ಟಾರೆ ಸಾಹಿತ್ಯ ಸಮ್ಮೇಳನ ಎಲ್ಲವನ್ನೂ ಒಳಗೊಂಡು ಇತಿಹಾಸ ದಾಖಲೆಯಾಗಿತ್ತು. ಮುಂದೆ ನಡೆಸುವವರಿಗೂ ಇದೊಂದು ಮಾದರಿ ಸಮ್ಮೇಳವಾಗಿ ಗೋಚರಿಸಿತ್ತು. ಇದರಲ್ಲಿ ಅಧಿಕಾರಿಯುತ ದರ್ಪವನ್ನು ಎಲ್ಲೂ ತೋರ್ಪಡಿಸದೆ ನಮ್ಮ ಮನೆಯ ಹಬ್ಬದಂತೆ ನಾವು ಮಾಡಿತೋರಿಸಿದ್ದೇವೆ. ಪುಸ್ತಕ ವ್ಯಾಪಾರದಲ್ಲಿ ಆನ್‌ಲೈನ್ ವ್ಯಾಪಾರ ವಹಿವಾಟಿಗೆ ಸ್ವಲ್ಪ ಪ್ರಮಾಣದಲ್ಲಿ ಕೊರತೆಯಾಗಿದ್ದನ್ನು ಗಮನಿಸಿದ್ದೆ. ಊಟದ ಸರತಿ ಸಾಲಿನಲ್ಲಿ ನಿಂತವರನ್ನೂ ಮಾತನಾಡಿಸಿದ್ದೆ. ಅವರ‌್ಯಾರೂ ಸ್ವಲ್ಪವೂ ಬೇಸರಪಟ್ಟುಕೊಳ್ಳದೆ, ಸಹಿಸಿಕೊಂಡು ನಮ್ಮಗೆ ಸಹಕರಿಸಿದ್ದರು. ಕೆಲವು ಸಣ್ಣ ಪುಟ್ಟ ಸಮಸ್ಯೆಗಳೂ ಎದುರಾದರೂ, ಅವೆಲ್ಲವನ್ನೂ ನಮ್ಮ ಜಿಲ್ಲೆಯ ಜನತೆ ಪಕ್ಕಕ್ಕೆ ಸರಿಸಿ ಸಾಹಿತ್ಯದ ಹೊನಲಲ್ಲಿ ತೇಲಿದ್ದು ನಮ್ಮೆಲ್ಲ ತಂಡಕ್ಕೆ ಖುಷಿ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಶಾಸಕರಾದ ರವಿಕುಮಾರ್ ಗಣಿಗ, ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿ.ಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಕಸಾಪ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net