ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಿ, ಜನ ಗೆಲ್ಲಿಸಿಲ್ವಾ?: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ

Minister-N.Cheluvarayaswamy
Published on

ಮಂಡ್ಯ: ಆಂಧ್ರಪ್ರದೇಶ, ಬಿಹಾರಕ್ಕೆ ಪ್ರಧಾನಮಂತ್ರಿ ನರೇಂದ್ರಮೋದಿ ಅನುದಾನ ಕೊಟ್ಟಿದ್ದಾರೆಯೇ ಹೊರತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯಲ್ಲ. ಟೀಕೆ ಮಾಡುವುದನ್ನು ಬಿಟ್ಟು ರಾಜ್ಯಕ್ಕೆ ಏನಾದರೂ ಅಭಿವೃದ್ಧಿ ಕೆಲಸ ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಗಾರಿಕೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೊರರಾಜ್ಯದವರ ರೀತಿ ಕರ್ನಾಟಕ ಸರ್ಕಾರ ಬಳಕೆ ಮಾಡಿಕೊಳ್ಳುತ್ತಿಲ್ಲವೆಂದು ಎಚ್‌ಡಿಕೆ ಹೇಳಿದ್ದಾರೆ. ನಾನು ಅರ್ಜಿ ಹಿಡಿದು ಅವರ ಮನೆ ಬಳಿ ನಿಲ್ಲಲು ಆಗುತ್ತಾ?. ರಾಷ್ಟ್ರೀಯ ಹೆದ್ದಾರಿ, ಫ್ಯಾಕ್ಟರಿ ಮಾಡಲು ಮಾಧ್ಯಮಗಳ ಮೂಲಕ ಹೇಳಿದ್ದೆ. ಅಭಿವೃದ್ಧಿ ಮಾಡಿ ಎಂದು ಈ ಜಿಲ್ಲೆ, ರಾಜ್ಯದ ಜನ ಗೆಲ್ಲಿಸಿಲ್ವಾ?. ನಾವು ಅರ್ಜಿ ಹಿಡಿದು ನಿಂತ್ಕೋಬೇಕಾ?. ಚಂದ್ರಬಾಬು ನಾಯ್ಡು, ನಿತೀಶ್‌ಕುಮಾರ್ ಸಹಕಾರದಿಂದ ಕೇಂದ್ರ ಸರ್ಕಾರ ಇದೆ. ಅವರ ಬೆಂಬಲ ಇಲ್ಲವೆಂದರೆ ನರೇಂದ್ರಮೋದಿ ಪ್ರಧಾನಿಯಾಗಿರಲ್ಲ. ಹಾಗಾಗಿ ಅವರ ರಾಜ್ಯಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದು ಟೀಕಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಕಡು ಭ್ರಷ್ಟ ಸರ್ಕಾರ ಎಂದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಸಿಆರ್‌ಎಸ್, ದೇವೇಗೌಡರ ಕುಟುಂಬ ಬಿಟ್ಟರೆ ಬೇರೆ ಯಾರು ಪ್ರಾಮಾಣಿಕರಲ್ಲ. ಈಗ ಕಾಂಗ್ರೆಸ್‌ನವರು ಮಾತ್ರ ಭ್ರಷ್ಟರು, ಬಿಜೆಪಿಯನ್ನ ಒಪ್ಪುತ್ತಾರೆ ಎನ್ನಿಸುತ್ತದೆ. ದೇವೇಗೌಡರಿಗೆ ಇನ್ನು ಹತ್ತಾರು ವರ್ಷ ಆಯಸ್ಸು ಸಿಗಲಿ. ಅವರು ನಮ್ಮನ್ನು ಹೀಗೆ ಟೀಕೆ ಮಾಡುತ್ತಿರಲಿ. ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಲು ಬಹಳಷ್ಟಿದೆ. ಇಳಿವಯಸ್ಸಿನಲ್ಲಿ ದೇವೇಗೌಡರ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ. ನಾನು ಅವರ ಜತೆಯಲ್ಲೇ ಇದ್ದು, ರಾಜಕಾರಣ ಮಾಡಿದವನು. ನನ್ನ ಜತೆ ಇದ್ದಾಗ ಅವರ ಮಕ್ಕಳಿಗೆ ದೇವೇಗೌಡರು ಏನು ಬುದ್ದಿ ಹೇಳಿದ್ದರೆಂದು ಗೊತ್ತಿದೆ. ನಾನು ಹವಾಯ್ ಚಪ್ಪಲಿ, ಪಂಚೆ ಹಾಕುತ್ತಿದೆ. ನೀವು ಹಾಗೇ ಇದ್ದೀರಾ ಎಂದು ಹೇಳುತ್ತಿದ್ದರು. ದೇವೇಗೌಡರ ಬಗ್ಗೆ ಅಪಾರ ಗೌರವ ಇದೆ ಎಂದರು.

ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಕೇಸ್ ರಾಜಕೀಯ ಪ್ರೇರಿತ. ಲೋಕಾಯುಕ್ತ ತನಿಖೆ ಮಾಡುತ್ತಿದೆ. ಇನ್ನೊಂದು ತನಿಖೆಗೆ ಅರ್ಜಿ ಕೊಟ್ಟರೆ ನಿಲ್ಲಲ್ಲ. ಮುಡಾ ಕೇಸ್‌ನಲ್ಲಿ ಯಾವುದೇ ಸತ್ವ ಇಲ್ಲ. ನ್ಯಾಯ ಕೊಟ್ಟ ನ್ಯಾಯಾಲಯಕ್ಕೆ ಧನ್ಯವಾದ ಎಂದ ಸಚಿವ ಚಲುವರಾಯಸ್ವಾಮಿ, ರಾಜ್ಯಸರ್ಕಾರದ ಎಲ್ಲ ನಿರ್ಧಾರಗಳನ್ನು ರಾಜ್ಯಪಾಲರು ನಿರಾಕರಣೆ ಮಾಡುತ್ತಾರೆ. ಅನೇಕ ವಿಚಾರಗಳಿಗೆ ಅಂಕಿತ ಹಾಕದೆ ವರ್ಷಗಟ್ಟಲೇ ಬಾಕಿ ಉಳಿದಿದೆ. ಆದರೆ ಎಲ್ಲದಕ್ಕೂ ಮೊದಲು ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದರು. ಬಿಜೆಪಿ ಮತ್ತು ಜೆಡಿಎಸ್‌ನವರ ಮೇಲಿನ ಆರೋಪಕ್ಕೆ ಸ್ಪಷ್ಟನೆ ಕೇಳಿ ಹಾಗೇ ಉಳಿಸಿಕೊಂಡಿದ್ದಾರೆ. ಮೈಕ್ರೋಫೈನಾನ್ಸ್ ಕಿರುಕುಳದ ವಿಚಾರದಲ್ಲಿ ಸರ್ಕಾರ ನಿಲುವು ತೆಗೆದುಕೊಂಡಿದೆ. ಆದರೆ ರಾಜ್ಯಪಾಲರು ಬಿಜೆಪಿ ವಕ್ತಾರರಾಗಿ ಕೆಲಸ ಮಾಡುತ್ತಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿದ್ದು, ನ್ಯಾಯ ಕೊಡುವ ಕೆಲಸ ರಾಜ್ಯಪಾಲರು ಮಾಡಬೇಕು. ಹೀಗೆ ಆದರೆ ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಬೇಸತ್ತವರೆಲ್ಲರೂ ಹೋಗಿ ಪ್ರತಿಭಟನೆ ಮಾಡುವ ಕಾಲ ಬರುತ್ತದೆ. ಸಾಲ ಕೊಟ್ಟಿದ್ದಾರೆಂದು ಆತ್ಮಹತ್ಯೆ ಮಾಡಿಕೊಳ್ಳುವ ರೀತಿ ಹಿಂಸಿಸಬಾರದು. ಬದಲಿಗೆ ನಿಯಮಾನುಸಾರ ಸಾಲ ವಸೂಲಾತಿ ಮಾಡಬೇಕು ಎಂದು ಹೇಳಿದರು.

ರಾಜ್ಯಸರ್ಕಾರದ ವಿರುದ್ಧ ಆರ್.ಅಶೋಕ್ ವಾಗ್ದಾಳಿ ವಿಚಾರಕ್ಕೆ ತಿರುಗೇಟು ನೀಡಿದ ಸಿಆರ್‌ಎಸ್, ಅಶೋಕ್ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡುತ್ತಿಲ್ಲ. ಆದ್ದರಿಂದ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ನನಗೆ ಅಶೋಕ್ ಆತ್ಮೀಯ, ಆದರೆ ಆತ ಪಾಪದ ಮನುಷ್ಯ. ಪಕ್ಷ ಕೊಟ್ಟಿರುವ ಸ್ಥಾನ ಉಳಿಸಿಕೊಳ್ಳಲು ಮಾತನಾಡುತ್ತಾರೆ. ಟಿವಿ ಮುಂದೆ ಮಾತನಾಡದೆ ಇದ್ದರೆ ವಿಪಕ್ಷ ನಾಯಕರಾಗಿ ಇರಲ್ಲ. ಜತೆಗೆ ರಾಜ್ಯಸರ್ಕಾರದ ಮೇಲೆ ವಾಗ್ದಾಳಿ ನಡೆಸದಿದ್ದರೆ ಅಶೋಕ್‌ನನ್ನೇ ಬದಲಾಯಿಸಿ ಬಿಡುತ್ತಾರೆ ಎಂದು ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net