ಸಾವಿನಲ್ಲೂ ರಾಜಕೀಯ ಮಾಡಿದರೆ ಹೇಗೆ?: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೇಸರ

07_01_Mdy_03(A(Minister N.Cheluvarayaswamy)
Published on

ಮಂಡ್ಯ: ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದಲ್ಲಿ ಅಮಾಯಕರ ಸಾವು ನಮಗೆಲ್ಲ ನೋವುಂಟು ಮಾಡಿದೆ. ಆದರೆ ಸಾವಿನಲ್ಲೂ ರಾಜಕಾರಣ ಮಾಡುತ್ತಿರುವವರಿಗೆ ಏನೂ ಮಾಡಲು ಸಾಧ್ಯ ಹೇಳಿ ಎಂದು ವಿಪಕ್ಷಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದವರು ಒಳ್ಳೆಯದು ಮಾಡಿದರು ವಿರೋಧಿಸುತ್ತಾರೆ. ಸುಮ್ಮನಿದ್ದರೂ ವಿರೋಧ ಮಾಡುತ್ತಾರೆ. ಬೆಂಗಳೂರಿನ ಘಟನೆ ಆಗಬಾರದಿತ್ತು. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೆಲವೊಮ್ಮೆ ಎಮೋಷನ್‌ನಲ್ಲಿ ಇಂತಹ ಘಟನೆಗಳು ಆಗುತ್ತದೆ. ಬೇರೆ ಘಟನೆ ಉದಾಹರಣೆ ಕೊಟ್ಟು ಈ ಘಟನೆ ಸಮರ್ಥಿಸಿಕೊಳ್ಳುವುದು ಬೇಡ. ಬದಲಿಗೆ ತಪ್ಪಾಗಿರುವುದು ಎಲ್ಲಿ ಎನ್ನುವುದನ್ನು ನೋಡಬೇಕು ಎಂದರು.

11 ಜನರ ಸಾವು ನಮ್ಮೆಲ್ಲರಿಗೂ ನೋವು ತಂದಿದೆ. ನಾವು ಏನೇ ಮಾಡಿದರು ಈ ಕುಟುಂಬಗಳಿಗೆ ಅವರ ಮಕ್ಕಳನ್ನು ತಂದು ಕೊಡಲು ಆಗಲ್ಲ. ಎಲ್ಲಿ ಎಡವಿದ್ದೇವೆ. ಯಾವ ತೀರ್ಮಾನದಲ್ಲಿ ತಪ್ಪಾಗಿದೆ ಎನ್ನುವುದನ್ನು ವಿಚಾರ ಮಾಡಬೇಕು. ಪೊಲೀಸ್ ಇಲಾಖೆ ಸರ್ಕಾರಕ್ಕೆ ಕೆಲವು ಮಾಹಿತಿ ಕೊಡುವುದರಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಕ್ಯಾಬಿನೆಟ್‌ನಲ್ಲಿ ಸುದೀರ್ಘ ಚರ್ಚೆ ನಂತರ ಅಧಿಕಾರಿಗಳ ಅಮಾನತು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಆದರೆ ಅಮಾನತು ಅಂತಿಮವಲ್ಲ. ಹಾಗೆಂದು ಯಾರನ್ನು ಸರಿ ಎನ್ನುವ ಪ್ರಶ್ನೆಯೂ ಇಲ್ಲ. ಇಂತಹ ಸಾವು, ನೋವಿನಲ್ಲೂ ರಾಜಕಾರಣ ಮಾಡುವವರಿಗೆ ಏನು ಹೇಳಲು ಆಗುತ್ತದೆ. ದೇವರು ಅವರಿಗೆ ಒಳ್ಳೆಯ ಬುದ್ದಿ ಕೊಡಲಿ. ಪೊಲೀಸ್ ಇಲಾಖೆ ನಿಯಂತ್ರಣ ಮಾಡಬೇಕಿತ್ತು. ಸರ್ಕಾರ ಪೊಲೀಸ್ ಇಲಾಖೆಗೆ ಜವಬ್ದಾರಿ ಕೊಡುತ್ತದೆ. ಅಲ್ಲಿ ಸರ್ಕಾರವೇ ನಿಯಂತ್ರಣ ಮಾಡಲು ಆಗುತ್ತದೆಯೇ ಎಂದರು.

ವಿಜಯೋತ್ಸವ ಬೇಡ ಎಂದಿದ್ದರು ಅಥವಾ ಬೇಕು ಎಂದಿದ್ದರೂ ಎಂಬ ಚರ್ಚೆ ಅವರವರ ಊಹೆಗೆ ಬಿಟ್ಟಿದ್ದು. ಬಿಜೆಪಿ ಮತ್ತು ಜೆಡಿಎಸ್‌ಗೆ ರಾಜಕಾರಣ ಮುಖ್ಯವಾಗಿದೆ. ಸಾವು ನೋವು ಮುಖ್ಯವಲ್ಲ. ಸದನದಲ್ಲಿ ಈ ವಿಷಯ ಚರ್ಚೆಗೆ ಬರಲಿದೆ. ಆಗ ಈ ಹಿಂದೆ ಅವರ ಕಾಲದಲ್ಲಾದ ಘಟನೆಗಳ ಬಗ್ಗೆ ಹೇಳುತ್ತೇವೆ. ಆಗ ಯಾರ‌್ಯಾರೂ ಎ1, ಎ2 ಆಗಿದ್ದರು, ಹೇಗೆ ನಡೆದುಕೊಂಡಿದ್ದರು ಹೇಳುತ್ತೇವೆ. ಈ ಸಂದರ್ಭದಲ್ಲಿ ಟೀಕೆಗೆ ಟೀಕೆಯೇ ಉತ್ತರವಲ್ಲ. ನಮ್ಮ ಸರ್ಕಾರ ಬಂದಾಗಿನಿಂದಲೂ ಅವರಿಗೆ ಸಮಾಧಾನ ಇಲ್ಲ. ಕೂತರೇ ನಿಂತರೇ ರಾಜೀನಾಮೆ ಕೇಳುವುದೇ ಇವರ ಕೆಲಸವಾಗಿದೆ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net