ಕಾರ್ಮಿಕರ ಸಮಸ್ಯೆಗೆ ಪರಿಹಾರ ; ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ಹೇಳಿಕೆ

1 harohalli 1
Published on

ಹಾರೋಹಳ್ಳಿ: ಕಾರ್ಮಿಕರ ಹಿತದೃಷ್ಟಿಯಿಂದ ಕೈಗಾರಿಕಾ ಪ್ರದೇಶಗಳಲ್ಲಿ ವಸತಿ ಸಮುಚ್ಚಯ ಹಾಗೂ ಇಎಸ್‌ಐ ಆಸ್ಪತ್ರೆ ನಿರ್ಮಿಸುವ ಕೆಲಸ ಮಾಡಲಾಗುವುದು ಎಂದು ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ಹೇಳಿದರು.

ಕನಕಪುರ ತಾಲೂಕಿನ ಹಾರೋಹಳ್ಳಿ, ಬಿಡದಿ ಮತ್ತು ಜಿಗಣಿ ಕೈಗಾರಿಕಾ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿ ಮಾತನಾಡಿ, ಇಎಸ್‌ಐ ಆಸ್ಪತ್ರೆ ಮತ್ತು ಅಗ್ನಿಶಾಮಕ ಠಾಣೆ ನಿರ್ಮಿಸಲು ಐದು ಎಕರೆ ಜಾಗ ನೀಡಲಾಗುವುದು. ಕೈಗಾರಿಕೆಗಳಲ್ಲಿ ಕೆಲಸ ಮಾಡಲು ದೂರದಿಂದ ಬರುವುದನ್ನು ತಪ್ಪಿಸಲು ಕಾರ್ಮಿಕರಿಗೆ ಅನುಕೂಲವಾಗುವಂತೆ ಕಟ್ಟಡ ಕಟ್ಟಿ ಅವರು ಇಲ್ಲಿಯೇ ನೆಲೆಸಲು ಕ್ರಮ ಕೈಗೊಳ್ಳಲಾಗುವುದು. ಅವರ ಆರೋಗ್ಯ ಕಾಪಾಡಲು ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಇದಕ್ಕೆ ಸರ್ಕಾರವೇ ಜಾಗ ಒದಗಿಸಲಿದೆ ಎಂದರು.

ಕಾರ್ಮಿಕರು ಕೈಗಾರಿಕಾ ಪ್ರದೇಶಗಳಿಗೆ ಮತ್ತು ಕಾರ್ಖಾನೆಗಳಿಗೆ ಬರಲು ಸಾರಿಗೆ ವ್ಯವಸ್ಥೆಗಳ ಕೊರತೆ ಇದ್ದು, ಬೆಂಗಳೂರು ಮತ್ತು ಬೇರೆ ಬೇರೆ ಕಡೆಗಳಿಂದ ಕೆಲಸ ಮಾಡಲು ಬರುವವರ ಸಮಸ್ಯೆ ನಿವಾರಣೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.

ಕೈಗಾರಿಕಾ ಪ್ರದೇಶದಲ್ಲಿ ಹಲವಾರು ತೊಂದರೆಗಳು ಮತ್ತು ಮೂಲ ಸಮಸ್ಯೆಗಳಿದ್ದು, ಅವುಗಳನ್ನು ಹಂತ-ಹಂತವಾಗಿ ಪರಿಹರಿಸುವ ಕೆಲಸ ಮಾಡಲು ಈಗಾಗಲೇ ಕ್ರಮ ಕೈಗೊಂಡಿದ್ದೇನೆ. ಯಾವ ಸಮಸ್ಯೆಗಳನ್ನು ಮೊದಲು ಪರಿಹರಿಸಬೇಕು ಎನ್ನುವುದನ್ನು ಅರಿತು ಅವುಗಳಿಗೆ ಆದ್ಯತೆ ನೀಡಲಾಗುವುದು ಎಂದರು.

ಸಮಸ್ಯೆಗಳಿರುವುದು ಸಾಮಾನ್ಯ: ಮಾಗಡಿಯಲ್ಲಿ ಕೈಗಾರಿಕಾ ಪ್ರದೇಶ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಆಗುತ್ತಿರುವ ಸ್ಥಳದ ಸಮಸ್ಯೆ ಭೂಮಿ ನೀಡಿಕೆಯಲ್ಲಾಗುತ್ತಿರುವ ಗೊಂದಲ ಸರಿಪಡಿಸುವ ಕೆಲಸ ಮಾಡಲಾಗುವುದು. ಇಂತಹ ದೊಡ್ಡ ಕೈಗಾರಿಕೆ ಪ್ರದೇಶವನ್ನು ನಿರ್ಮಾಣ ಮಾಡುವಾಗ ರಾಜಕೀಯವಾಗಿ ಸಮಸ್ಯೆಗಳು ಕಂಡು ಬರುತ್ತವೆ. ಅದನ್ನು ರೈತರೊಂದಿಗೆ ಮತ್ತು ಮುಖಂಡರೊಂದಿಗೆ ಚರ್ಚಿಸಿ ಬಗೆಹರಿಸಲಾಗುವುದು ಎಂದು ಹೇಳಿದರು.

ಅಟಲ್ ಅನ್ನಪೂರ್ಣ ಕ್ಯಾಂಟೀನ್‌ನ ಆಹಾರ ಸವಿದ ಸಚಿವ: ಹಾರೋಹಳ್ಳಿಯಲ್ಲಿರುವ ಅಟಲ್ ಅನ್ನಪೂರ್ಣ ಕ್ಯಾಂಟೀನ್‌ಗೆ ಭೇಟಿ ನೀಡಿ ತಿಂಡಿ ಸವಿದು ಮಾತನಾಡಿದ ಸಚಿವ ಮುರಗೇಶ್ ನಿರಾಣಿ, ಕೇವಲ 10 ರೂಪಾಯಿಗೆ ಊಟ, ತಿಂಡಿ ನೀಡುತ್ತಿದ್ದು, ಬಡವರ ಮತ್ತು ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರ ಹಸಿವು ನೀಗಿಸುತ್ತಿದೆ. ಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ್ ಮತ್ತು ರಾಮನಗರ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಮುರಳೀಧರ್ ಮತ್ತು ತಂಡದವರು ಮಾಡುತ್ತಿರುವ ಕಾರ್ಯ ಉತ್ತಮವಾಗಿದ್ದು, ಇದು ಮುಂದುವರಿಯಲಿ ಎಂದು ಹೇಳಿದರು.

ಕೆಆರ್‌ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್, ರಾಮನಗರ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಮುರಳೀಧರ್, ಕನಕಪುರ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್, ನಿರ್ದೇಶಕ ವಿಜಯ್‌ಕುಮಾರ್, ರಾಮನಗರ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಹಾರೋಹಳ್ಳಿ ಚಂದ್ರು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಮಸಾಗರಕೃಷ್ಣ, ಹಾರೋಹಳ್ಳಿ ಹೋಬಳಿ ಅಧ್ಯಕ್ಷ ಪ್ರಕಾಶ್, ಮುಖಂಡರಾದ ಮರಳವಾಡಿಚಂದ್ರ, ಮಲ್ಲೇಶ್, ಸೊಂಟೇನಹಳ್ಳಿಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net