

ಮಂಡ್ಯ: ನಗರದ ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ಮಾ.10ರಂದು ಬೃಹತ್ ಗ್ಯಾರಂಟಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆದ್ದರಿಂದ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಬರಲು ಅಗತ್ಯ ಬಸ್ ವ್ಯವಸ್ಥೆಯಾಗಬೇಕು. ತಹಸೀಲ್ದಾರ್‌ಗಳು ತಮ್ಮ ತಾಲೂಕಿನಲ್ಲಿ ಸಭೆ ಆಯೋಜಿಸಿ ರೂಟ್‌ಮ್ಯಾಪ್ ಮಾಡಿಕೊಳ್ಳಬೇಕು. ಎಲ್ಲ ಅಧಿಕಾರಿಗಳಿಗೂ ಜವಾಬ್ದಾರಿ ವಹಿಸುವಂತೆ ತಿಳಿಸಿದರು.
ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬೇಸಿಗೆ ತಾಪ ಹೆಚ್ಚಿರುವುದರಿಂದ ಕುಡಿಯುವ ನೀರಿನ ವ್ಯವಸ್ಥೆ ಉತ್ತಮವಾಗಿ ಮಾಡಬೇಕು. ತಾತ್ಕಾಲಿಕ ಶೌಚಗೃಹ ನಿರ್ಮಿಸಬೇಕು. ಸಮಾವೇಶ ಮುಗಿದ ನಂತರ ಯಾವುದೇ ನೂಕು ನುಗ್ಗಲೂ ಇಲ್ಲದಂತೆ ಎಲ್ಲರಿಗೂ ಊಟದ ವ್ಯವಸ್ಥೆಯಾಗಬೇಕು. ಇದಕ್ಕೆ 100 ಅಥವಾ ಅವಶ್ಯಕತೆ ಇರುವಷ್ಟು ಕೌಂಟರ್ ತೆರೆದು ಊಟ ವಿತರಣೆ ಮಾಡಲು ಯೋಜನೆ ರೂಪಿಸಿ. ಸಮಾವೇಶದ ವೀಕ್ಷಣೆಗೆ ಅಲ್ಲಲ್ಲಿ ಎಲ್.ಇ.ಡಿ ವಾಲ್ ವ್ಯವಸ್ಥೆ ಮಾಡಿ. ಧ್ವನಿ ವರ್ಧಕಗಳು ಉತ್ತಮವಾಗಿರಲಿ, ಈ ಸಂಬಂಧ ಮೊದಲೇ ಪರೀಕ್ಷಿಸಿ ಸಿದ್ಧಪಡಿಸಿಕೊಳ್ಳಿ ಎಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಲು ವೇದಿಕೆ, ಆಹಾರ, ಸಾರಿಗೆ ಹಾಗೂ ಫಲಾನುಭವಿಗಳ ಆಯೋಜನೆ ವಿವಿಧ ಸಮಿತಿ ರಚಿಸಲಾಗಿದೆ. ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಕರೆತರಲು ತಾಲೂಕಿಗೆ ಒಬ್ಬರಂತೆ ಜಿಲ್ಲಾಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಚೆಸ್ಕಾಂ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರವಿಕುಮಾರ್ ಗಣಿಗ, ಕೆ.ಎಂ.ಉದಯ್, ದರ್ಶನ್ ಪುಟ್ಟಣ್ಣಯ್ಯ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಇತರರಿದ್ದರು.