ಬರ ಪರಿಸ್ಥಿತಿ ವರದಿಯನ್ನು ಮಾ.10 ರೊಳಗೆ ಡಿಸಿಗೆ ಸಲ್ಲಿಸಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

Minister meeting on Drought mandya
Published on

ಮಂಡ್ಯ: ಬರ ಪರಿಸ್ಥಿತಿ ಸಂಬಂಧಿಸಿದಂತೆ ಶಾಸಕರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ತಾಲೂಕುಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿ ಅದಕ್ಕೆ ಸಂಬಂಧಿಸಿದ ವರದಿಯನ್ನು ಮಾ.10ರೊಳಗೆ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಬರ ಪರಿಹಾರ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ದಿನಾಂಕ ಪ್ರಕಟವಾದ ನಂತರ ಸಭೆ ನಡೆಸಲು ಸಾಧ್ಯತೆ ಇರುವುದಿಲ್ಲ. ಆದ್ದರಿಂದ ಅಧಿಕಾರಿಗಳು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬರದ ಪರಿಸ್ಥಿತಿ ಮುಂದುವರೆದರೆ ಕುಡಿಯುವ ನೀರೊದಗಿಸಲು ಬೇಕಿರುವ ಸಿದ್ಧತೆಗಳನ್ನು ಮಾಡಿಕೊಳ್ಳಿ. ಜನ ಮತ್ತು ಜಾನುವಾರುಗಳಿಗೆ ತೊಂದರೆಯಾಗಬಾರದು. ಬೋರ್‌ವೆಲ್ಗಳನ್ನು ಕೊರೆಯುವ ಮೊದಲು ಅಗತ್ಯತೆ ಇರುವ ಸ್ಥಳಗಳನ್ನು ಗುರುತಿಸಿ ಕೊರೆಯಿರಿ, ಅನಗತ್ಯವಾಗಿ ಅನುದಾನ ಪೋಲು ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.

ಅನಿವಾರ್ಯ ಸಂದರ್ಭದಲ್ಲಿ ಖಾಸಗಿ ಬೋರ್‌ವೆಲ್ಗಳಿಂದ ನೀರು ಪಡೆಯಿರಿ. ಖಾಸಗಿ ಬೋರ್‌ವೆಲ್ಗಳಲ್ಲೂ ಲಭ್ಯವಿಲ್ಲದಿದ್ದರೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಬೇಕು. ಸರ್ಕಾರದಿಂದ ಅಭಿವೃದ್ಧಿ ಕೆಲಸಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ಮಾ.15ರೊಳಗೆ ವೆಚ್ಚ ಮಾಡಿ. ಈ ಸಂಬಂಧ ಡಿಸಿ, ಜಿಪಂ ಸಿಇಒ ಖಾತ್ರಿ ಪಡಿಸಿಕೊಳ್ಳಿ ಎಂದರು.

ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಕುಡಿಯುವ ನೀರಿನ ಕೊರತೆ ಹಾಗೂ ಬೇಸಿಗೆಯ ಹಿನ್ನಲೆ ಸಾರ್ವಜನಿಕರ ಆರೋಗ್ಯದ ಬಗ್ಗೆ ಸಂಬಂಧಿಸಿದ ಇಲಾಖೆ ಹೆಚ್ಚಿನ ಕಾಳಜಿ ವಹಿಸಬೇಕು. ಅಗತ್ಯ ಔಷಧವನ್ನು ದಾಸ್ತಾನು ಮಾಡಿಕೊಳ್ಳಿ ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಜಿಲ್ಲೆಯಲ್ಲಿ 3 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದೆ. 9 ಕಡೆ ಖಾಸಗಿ ಬೋರ್‌ವೆಲ್ಗಳಿಗೆ 18 ಸಾವಿರ ರೂ ಬಾಡಿಗೆ ನಿಗದಿ ಪಡಿಸಿ ನೀರು ಪಡೆಯಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಚೆಸ್ಕಾಂ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ, ಶಾಸಕರಾದ ರವಿಕುಮಾರ್ ಗಣಿಗ, ಕೆ.ಎಂ.ಉದಯ್, ದರ್ಶನ್ ಪುಟ್ಟಣ್ಣಯ್ಯ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net