

ಮಂಡ್ಯ: ವರುಣನ ಅರ್ಭಟದಿಂದ ಜನ, ಜಾನುವಾರುಗಳು ಪರಿತಪಿಸುವಂತಾಗಿದೆ. ಆದ್ದರಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ತುರ್ತು ಕಾರ್ಯನಿರ್ವಹಣೆಗೆ ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಾಕೀತು ಮಾಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಳೆಹಾನಿ ಪ್ರದೇಶಕ್ಕೆ ತುರ್ತು ಭೇಟಿ ನೀಡಿ ಅಗತ್ಯ ನೆರವು ಒದಗಿಸಲು ಮುಂದಾಗಬೇಕು. ರಜೆ ಹಾಕದೆ ಕಾರ್ಯ ನಿರ್ವಹಿಸಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನಿರೀಕ್ಷಿತ ಭೇಟಿ ನೀಡುವ ಸಂಭವವಿದ್ದು, ಕಾರ್ಯಕ್ಷಮತೆಯಿಂದ ಕರ್ತವ್ಯ ನಿರ್ವಹಿಸದೆ ಇದ್ದರೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶಾಸಕ ಕೆ.ಸುರೇಶ್‌ಗೌಡ ಮಾತನಾಡಿ, ಮಳೆಹಾನಿ ಪ್ರದೇಶದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಪರಿಹಾರ ನೀಡಲು ವಿಳಂಬ ನೀತಿ ಅನುಸರಿಸುತ್ತಾರೆ. ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದ್ದರೂ, ದುರಸ್ತಿಗೆ ಮುಂದಾಗದೇ ಟೆಂಡರ್ ನೆಪ ಹೇಳುತ್ತಾರೆ. ಗ್ರಾಮ ಲೆಕ್ಕಾಧಿಕಾರಿ, ಶಿರಸ್ತೇದಾರ್ ಹಾಗೂ ಪಿಡಿಒಗಳು ಕೇಂದ್ರ ಸ್ಥಳದಲ್ಲಿದ್ದು ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಸಮಸ್ಯೆ ಬಿಗಡಾಯಿಸಿದೆ ಎಂದು ಅಸಮಾಧಾನ ಹೊರಹಾಕಿದರು.
ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಮಳೆಹಾನಿ ಬಗ್ಗೆ ಸಮೀಕ್ಷೆ ನಡೆಸಲು ತಿಂಗಳ ಅಂತ್ಯದವರೆಗೂ ಅವಕಾಶವಿದ್ದರೂ ಅಧಿಕಾರಿಗಳು ಅದನ್ನು ಸಮಪರ್ಕವಾಗಿ ಮಾಡುತ್ತಿಲ್ಲ. ಮಂಡ್ಯ ತಾಲೂಕಿನ ಸಂತೆಕಸಲಗೆರೆ ಹಾಗೂ ಇಂಡುವಾಳು ಗ್ರಾಮ ಪಂಚಾಯಿತಿಯ ಪಿಡಿಒಗಳು ಸರ್ಕಾರಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದು, ಇವರ ಮೇಲೆ ಕ್ರಮ ವಹಿಸಬೇಕೆಂದು ಸಿಇಒ ಶಾಂತಾ ಎಲ್.ಹುಲ್ಮನಿ ಅವರಿಗೆ ಸೂಚಿಸಿದರು.
ಕೆ.ಗೋಪಾಲಯ್ಯ ಪ್ರತಿಕ್ರಿಯಿಸಿ, ಕಂದಾಯ ಮತ್ತು ಕೃಷಿ, ನೀರಾವರಿ ಹಾಗೂ ಲೋಕೋಪಯೋಗಿ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳು ಹೊಣೆಗಾರಿಕೆ ಅರಿತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.