

ಮಂಡ್ಯ: ಕೆ.ಆರ್.ಪೇಟೆ ತಾಲೂಕು ಅಂಬಿಗರಹಳ್ಳಿ - ಸಂಗಾಪುರದ ತ್ರಿವೇಣಿ ಸಂಗಮದಲ್ಲಿ ಅ.15, 16 ಮತ್ತು17 ರಂದು ಕಾಲ ಕುಂಭಮೇಳ ನಡೆಯಲಿದೆ. ಈ ಬೃಹತ್ ಕುಂಭಮೇಳ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಕಿರಿದಾದ ರಸ್ತೆಗಳು, ಅಕ್ಕಪಕ್ಕದಲ್ಲಿ ಖಾಸಗಿ ಒಡೆತನದ ಜಾಗಗಳಿವೆ. ಆದ್ದರಿಂದ ಅವಶ್ಯಕವಾಗಿ ರಸ್ತೆಗಳನ್ನು ವಿಸ್ತರಿಸಬೇಕಾಗಿದೆ ಎಂದು ಹೇಳಿದರು.
ಮೂಲ ಸೌಕರ್ಯಗಳಾದ ರಸ್ತೆ, ಶೌಚಗೃಹ, ವಾಹನ ನಿಲ್ದಾಣ, ಕುಡಿಯುವ ನೀರು, ಊಟೋಪಚಾರ, ನೈರ್ಮಲ್ಯ, ತಂಗುದಾಣಗಳು, ವೈದ್ಯಕೀಯ ಸೇವೆಗಳು ಮತ್ತು ತುರ್ತುಚಿಕಿತ್ಸೆ, ಅಗ್ನಶಾಮಕದಳ, ಹೆಲಿಪ್ಯಾಡ್, ರಕ್ಷಣಕಾರ್ಯ, ವಿಚಾರಣಾ ಕೌಂಟರ್ ಗಳ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಕೊಳ್ಳಬೇಕಿದೆ. ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ಸಭೆ ನಡೆಸಿ ಪ್ರಾಥಮಿಕವಾಗಿ ಕುಂಭ ಮೇಳ ನಡೆಸಲು ಬೇಕಿರುವ ಕಾರ್ಯಯೋಜನೆಗಳನ್ನು ಸಿದ್ಧಪಡಿಸಿಕೊಂಡು ನಂತರ ಮತ್ತೊಂದು ಸಭೆ ನಡೆಸುವಂತೆ ಡಿಸಿಗೆ ಸೂಚಿಸಿದರು.
ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಶಾಸಕ ಎಂ.ಶ್ರೀನಿವಾಸ್, ಎಚ್.ಎಸ್.ಮಂಜು, ಶ್ರೀನಿವಾಸ್ ಇತರರಿದ್ದರು.