

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಬಹು ಮಾಲಿಕತ್ವ ಹೊಂದಿರುವ ಖಾಸಗಿ ಜಮೀನುಗಳ ಪೋಡಿ ಕಾರ್ಯ, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿನ ದರಾಖಾಸ್ತು ಪೋಡಿ ಕಾರ್ಯ ಹಾಗೂ ಜಮೀನು ಮಾಲೀಕತ್ವವನ್ನು ವಾರಸುದಾರರಿಗೆ ಮಾಡಿಕೊಡುವ ಫವತಿ ಖಾತೆ ಆಂದೋಲನಕ್ಕೆ ಆದ್ಯತೆ ನೀಡಿ ಕಾರ್ಯರೂಪಕ್ಕೆ ತಂದು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.
ದೇವನಹಳ್ಳಿಯ ಜಿಲ್ಲಾಪಂಚಾಯತಿ ಸಭಾಂಗಣದಲ್ಲಿ ಗುರುವಾರ ಗ್ರಾಮಾಂತರ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಈಗಾಗಲೇ ಸರ್ಕಾರಿ ಜಮೀನುಗಳ ಸರ್ವೆ ಕಾರ್ಯ ಮುಗಿಸಿ ಶೇ. 98 ಸರ್ಕಾರಿ ಜಮೀನು ಗುರುತಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಮಾಲೀಕತ್ವದ ಒಂದೇ ಪಹಣಿಯಲ್ಲಿನ ಖಾತೆಗಳನ್ನು ಪೋಡಿ ಮಾಡಲು, ಖಾಸಗಿ ಜಂಟಿ ಮಾಲಿಕತ್ವ ದ ಖಾತೆಗಳನ್ನು ಪೋಡಿ ಮಾಡಲು ಜಿಲ್ಲೆಯಾದ್ಯಂತ ಸರ್ವೇ ಕಾರ್ಯ ನಡೆಯುತ್ತಿದೆ. ಅಂದಾಜು 45 ಸಾವಿರ ಬಹುಮಾಲೀಕತ್ವ ಪಹಣಿಗಳು ಬಾಕಿ ಇದ್ದು ಹಂತ ಹಂತವಾಗಿ ಸರ್ವೆ ಕಾರ್ಯ ಮುಗಿಸಿ ಪೋಡಿ ಮಾಡಬೇಕು ಎಂದು ಸೂಚಿಸಿದರು. ಮೊದಲ ಹಂತವಾಗಿ ಈ ತಿಂಗಳಲ್ಲಿ 5 ಗ್ರಾಮಗಳನ್ನು ದರಖಾಸ್ತು ಪೋಡಿ ಆಂದೋಲನಕ್ಕೆ ಆಯ್ಕೆ ಮಾಡಿಕೊಂಡ ಕಾರ್ಯಾರಂಭ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಒತ್ತುವರಿ ತೆರವು ಮಾಡಬೇಕು: ಸರ್ಕಾರಿ ಜಮೀನು ಒತ್ತುವರಿ ತೆರವು ಕಾರ್ಯ ಶೀಘ್ರವಾಗಿ ಆಗಬೇಕು. ಸ್ಮಶಾನ ಹಾಗೂ ಕೆರೆ ಒತ್ತುವರಿ ತೆರವು ತ್ವರಿತವಾಗಿ ಪೂರ್ಣಗೊಳಿಸಿ. ಸ್ಮಶಾನ ಜಾಗವನ್ನು ಸರ್ವೆ ಕಾರ್ಯ ಮಾಡಿಸಿದ ನಂತರ ನರೇಗಾ ಯೋಜನೆ ಮುಖಾಂತರ ಕಾಂಪೌಂಡ್ ನಿರ್ಮಿಸಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಗೆ ಒಪ್ಪಿಸಿಸಬೇಕು, ಗ್ರಾಮ ಪಂಚಾಯಿತಿ ಸ್ವತ್ತು ಎಂದು ನಾಮಫಲಕ ಅಳವಡಿಸಿ ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.ಡಿಜಿಟಲೀಕರಣಕ್ಕೆ ಒತ್ತು-ತಂತ್ರಜ್ಞಾನವನ್ನು ಬಳಸಿ ಇ-ಆಫೀಸ್, ಇ- ಗೌರ್ನೆಸ್ ಮೂಲಕ ಕಂದಾಯ ಇಲಾಖೆಯಡಿ ಬರುವ ಎಲ್ಲ ಕಾರ್ಯಗಳನ್ನು ಡಿಜಿಟಲೀಕರಣ ಮಾಡಲಾಗುವುದು. ಇದರಿಂದ ಕೆಲಸದ ಒತ್ತಡ ಸರಳೀಕರಣವಾಗಲಿದೆ. ಜಮೀನುಗಳ ದಾಖಲೆಗಳು ಆನ್‌ಲೈನ್‌ನಲ್ಲಿ ಸಿಗುವಂತೆ ಡಿಜಿಟಲೀಕರಣ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 1993 ಸರ್ವೆ ನಂಬರ್‌ಗಳ ಪೈಕಿ 589 ಸರ್ವೆ ನಂಬರ್ ಡಿಜಿಟಲೀಕರಣಗೊಳಿಸಲಾಗಿದೆ. ಬಾಕಿ ಇರುವ 1404 ಸರ್ವೆ ನಂಬರ್‌ಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ವಂಚನೆ ತಪ್ಪಲಿದೆ: ಪಹಣಿಗೆ ಆಧಾರ್ ಜೋಡಣೆ ಮಾಡುವದರಿಂದ ಯಾರದೋ ಜಮೀನು ಇನ್ಯಾರೋ ಮಾರಾಟ ಮಾಡುವ ವಂಚನೆ ತಪ್ಪಿಸಲು ಸಹಕಾರಿಯಾಗಿದ್ದು, ರೈತರು ಬೇಗನೆ ತಮ್ಮ ಜಮೀನು ಪಹಣಿಗೆ ಆಧಾರ ಜೋಡಣೆ ಮಾಡಿಕೊಳ್ಳಬೇಕು ಎಂದು ಕಂದಾಯ ಸಚಿವರು ರೈತರಲ್ಲಿ ಮನವಿ ಮಾಡಿದರು. ಕಂದಾಯ ಇಲಾಖೆಯನ್ನು ಮಾತೃ ಇಲಾಖೆ ಎಂದು ಕರೆಯಲಾಗುತ್ತದೆ. ಕಂದಾಯ ಇಲಾಖೆ ಅಧಿಕಾರಿಗಳು ಇದನ್ನು ಅರಿತು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಜನರ ನಿರೀಕ್ಷೆಯನ್ನು ಹುಸಿಗೊಳಿಸದೇ ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ ಪರಿಹಾರ ಒದಗಿಸುವಲ್ಲಿ ನಿರಂತರ ಕಾರ್ಯಪ್ರವೃತ್ತರಾಗಿರಬೇಕು ಎಂದು ಹೇಳಿದರು.
ಸಾರ್ವಜನಿಕರ ಅಲೆದಾಟ ತಪ್ಪಿಸಿ: