ಮೃತ ಮೀನುಗಾರರ ಕುಟುಂಬಕ್ಕೆ ಪರಿಹಾರ ಧನ ವಿತರಣೆ

udp-15-mankala vaidya
Published on

ಉಡುಪಿ: ಕರಾವಳಿ ಭಾಗದಲ್ಲಿ ಮೀನುಗಾರಿಕಾ ದೋಣಿ ದುರಂತ ಮರುಕಳಿಸದಂತೆ ಮೀನುಗಾರರು ಎಚ್ಚರಿಕೆ ವಹಿಸಬೇಕು. ಕಾಲಕಾಲಕ್ಕೆ ಹವಾಮಾನ ಇಲಾಖೆಯಿಂದ ನೀಡಲಾಗುವ ಮುನ್ಸೂಚನೆಗಳನ್ನು ಪಾಲಿಸಬೇಕು. ಸಮುದ್ರ ಪ್ರಕ್ಷಬ್ಧವಾಗಿರುವುದರಿಂದ ಕರಾವಳಿ ಭಾಗದ ಮೀನುಗಾರರು ಮೀನು ಹಿಡಿಯಲು ಸಮುದ್ರಕ್ಕೆ ಇಳಿಯದಂತೆ ಮೀನುಗಾರಿಕಾ ಸಚಿವ ಮಂಕಾಳ ಎಸ್​. ವೈದ್ಯ ಮನವಿ ಮಾಡಿದರು.

ಇತ್ತೀಚೆಗೆ ಮೀನುಗಾರಿಕೆ ಸಂದರ್ಭದಲ್ಲಿ ಮೃತಪಟ್ಟ ನೀಲಾಧರ ಜಿ. ತಿಂಗಳಾಯ ಅವರ ಪಿತ್ರೋಡಿ ಮನೆಗೆ ಭೇಟಿ ನೀಡಿ, ಪರಿಹಾರದ ಚೆಕ್​ ವಿತರಿಸಿ ಮಾತನಾಡಿದರು. ಭಟ್ಕಳ, ಮುರ್ಡೇಶ್ವರ, ಮಲ್ಪೆ ಸೇರಿದಂತೆ ವಿವಿಧೆಡೆ ಇಂತಹ ಘಟನೆಗಳು ಮತ್ತೆ ಮತ್ತೆ ಸಂಭವಿಸುತ್ತಿರುವುದು ಅತೀವ ನೋವು ತಂದಿದೆ. ಮೃತ ಮೀನುಗಾರರ ಕುಟುಂಬಕ್ಕೆ ಸರಕಾರದ ವತಿಯಿಂದ ಎಲ್ಲಾ ರೀತಿಯ ಸಹಾಯ ನೀಡಲಾಗುವುದು. ಈ ಹಿಂದೆ 6 ಲಕ್ಷ ರೂ. ಇದ್ದ ಪರಿಹಾರದ ಹಣವನ್ನು ವಿಶ್ವ ಮೀನುಗಾರಿಕೆ ದಿನದಂದು 10 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಪ್ರಥಮಬಾರಿಗೆ ದೋಣಿ, ಇಂಜಿನ್​, ಬಲೆ ಖರೀದಿಗೆ ಸಹ 5 ಲಕ್ಷ ರೂ. ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಯಶ್​ ಪಾಲ್​ ಎಸ್​. ಸುವರ್ಣ, ಗುರ್ಮೆ ಸುರೇಶ್​ ಶೆಟ್ಟಿ, ಗ್ಯಾರಂಟಿ ಯೋಜನ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಅಶೋಕ್​ ಕುಮಾರ್​ ಕೊಡವೂರು, ವಿನಯಕುಮಾರ್​ ಸೊರಕೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net