ದೇವಸ್ಥಾನಗಳ ಜೀಣೋದ್ಧಾರಕ್ಕೆ ಪಣ; ಸಚಿವ ಮಂಕಾಳ ವೈದ್ಯ ಭರವಸೆ

BKL SANMAN
Published on

ಭಟ್ಕಳ: ಒಂದು ಒಳ್ಳೆಯ ಕಾರ್ಯ ಮಾಡಲು ಸಮುದಾಯ ಒಂದಾದಾಗಲೆ ದೇವರ ಶಕ್ತಿ ಅರಿವಾಗುತ್ತದೆ ಎನ್ನುವುದಕ್ಕೆ ಭಟ್ಕಳದ ಇತಿಹಾಸ ಪ್ರಸಿದ್ಧ ತಾಲೂಕಿನ ಶಕ್ತಿ ದೇವತೆಯಾದ ಇಲ್ಲಿನ ಮಣ್ಕುಳಿಯ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಶ್ರೀ ನಾಗಮಾಸ್ತಿ ಕ್ಷೇತ್ರವೇ ಒಂದು ಉತ್ತಮ ಉದಾಹರಣೆಯಾಗಿದೆ ಎಂದು ಉಕ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ಪಟ್ಟಣದ ಶ್ರೀ ನಾಗಮಾಸ್ತಿ ಸನ್ನಿಧಾನದಲ್ಲಿ ಪ್ರಥಮ ವರ್ಷದ ವರ್ಧಂತ್ಯುತ್ಸವದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾವು ದೇವರನ್ನು ನಂಬಿ ಬದುಕುವವರು. ಬೆಳಗ್ಗೆ ಎದ್ದ ಕೂಡಲೆ ಮೊದಲು ದೇವರ ಸ್ಮರಣೆ ಮಾಡಿ ದಿನದ ಆರಂಭವಾದರೆ ಮತ್ತೆ ಮಲಗುವಾಗ ದೇವರನ್ನು ಸ್ಮರಿಸಿ ಮಲಗುವವರು. ಹಾಗಾಗಿ ನಮ್ಮ ಪ್ರದೇಶದಲ್ಲಿ ಸಮಯಕ್ಕೆ ಸರಿಯಾಗಿ ಮಳೆ-ಬೆಳೆ ಆಗುತ್ತಿದೆ. ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ನಾವು ಪುಣ್ಯವಂತರು. ದೇವಸ್ಥಾನದ ಜೀಣೋದ್ಧಾರಕ್ಕೆ ಪಣ ತೊಟ್ಟಿದ್ದು, ಆದಾಯ ಇಲ್ಲದ ದೇವಸ್ಥಾನಗಳಲ್ಲಿ ಯಾವುದೆ ತೊಂದರೆ ಇದ್ದರೂ ಸಂಪರ್ಕಿಸಬಹುದು ಎಂದು ಭರವಸೆ ನೀಡಿದರು.

ಜೀಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ ಕುಮಾರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಲಸಂವರ್ಧನ ಸಮಿತಿ ಸೇರಿ ಶ್ರೀ ನಾಗಮಾಸ್ತಿ ಸನ್ನಿಧಿ ವ್ಯಾಪ್ತಿಯಲ್ಲಿ ಬರುವ ಸಾಧಕರನ್ನು ಸನ್ಮಾನಿಸಲಾಯಿತು. ಶ್ರೀ ನಾಗಯಕ್ಷೇ ಧರ್ಮದೇವಿ ಸಂಸ್ಥಾನದ ಧರ್ಮದರ್ಶಿ ರಾಮದಾಸ ಪ್ರಭು, ಶ್ರೀ ವೀರಾಂಜನೆಯ ದೇವಸ್ಥಾನದ ಧರ್ಮದರ್ಶಿ ಅನಂತ ನಾಯ್ಕ, ಟಿಎಚ್​ಒ ಡಾ. ಸವಿತಾ ಕಾಮತ, ಶ್ರೀ ನಾಗಮಾಸ್ತಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಲೋಕೇಶ ನಾಯ್ಕ, ಸದಸ್ಯೆ ಗಿರಿಜಾ ದೇವಾಡಿಗ, ನಾಗರಾಜ ನಾಯ್ಕ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net