ಮುರ್ಡೇಶ್ವರದಲ್ಲಿ ಕ್ರೂಸ್‌ ಶಿಪ್‌ ಬರುವಂಥ ಬಂದರು ನಿರ್ಮಾಣ

Minista-Mankal-Meeting
Published on

ಕಾರವಾರ: ಸರ್ಕಾರದ ಪ್ರಸ್ತುತ ಮಾರ್ಗಸೂಚಿಯಂತೆ ಅನುಮತಿ ಪಡೆದು ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಹೋಂ-ಸ್ಟೇ ಗಳನ್ನು ಪರಿಶೀಲಿಸಿ, ವರದಿ ನೀಡಿ, ಅನಧಿಕೃತ ಹೋಂ-ಸ್ಟೇಗಳ ವಿರುದ್ಧ ಕ್ರಮ ವಹಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪ್ರವಾಸೋದ್ಯಮ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಪ್ರವಾಸೋದ್ಯಮ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶರಾವತಿ ನದಿ ತೀರದ ಬೋಟಿಂಗ್ ಚಟುವಟಿಕೆಗಳ ಸುರಕ್ಷತೆ ಪರಿಶೀಲಿಸಿ, ಜಿಲ್ಲೆಯ ಯಾವುದೇ ಭಾಘದಲ್ಲಿ ಹೊಸ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅನುಮತಿ ನೀಡುವ ಮುನ್ನ ಕಡ್ಡಾಯವಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆ ಸಮಿತಿಯ ಸಭೆಯಲ್ಲಿ ಪರಿಶೀಲಿಸಿ ಎಂದು ಸೂಚಿಸಿದರು.
ಇಲಾಖೆಯಿಂದಲೇ ಲೈಪ್ ಗಾರ್ಡ್:
ಜಿಲ್ಲೆಯ ಎಲ್ಲ ಬೀಚ್‌ಗಳ ಪ್ರವಾಸಿಗರ ಸುರಕ್ಷತೆಗೆ ಕ್ರಮ ವಹಿಸಿ, ಯಾವುದೇ ಜೀವ ಹಾನಿ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿ, ಕಡಲ ತೀರಕ್ಕೆ ಆಗಮಿಸುವ ಪ್ರವಾಸಿಗರಿಗೆ ಕಡಲಿನ ಅಪಾಯದ ಬಗ್ಗೆ ಜಾಗೃತಿ ಮೂಡಿಸಿ ಎಂದರು. ಎಲ್ಲ ಬೀಚ್‌ಗಳಲ್ಲಿ ಅಗತ್ಯವಿರುವಷ್ಟು ಸಂಖ್ಯೆಯ ಜೀವ ರಕ್ಷಕರನ್ನು ಹಾಗೂ ಮೇಲ್ವಿಚಾರಕರನ್ನು ಪ್ರವಾಸೋದ್ಯಮ ಇಲಾಖೆಯಿಂದಲೇ ನೇಮಕ ಮಾಡಿ. ಅವರು ಕಾರ್ಯ ನಿರ್ವಹಿಸಬೇಕಾದ ನಿರ್ದಿಷ್ಟ ಸ್ಥಳವನ್ನು ಹಂಚಿಕೆ ಮಾಡಿ. ಅವರಿಗೆ ಅಗತ್ಯವಿರುವ ಜೀವ ರಕ್ಷಕ ಸಲಕರಣೆಗಳನ್ನು ಒದಗಿಸಿ ಎಂದು ಸೂಚನೆ ನೀಡಿದರು. ಕಡಲ ತೀರಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸುವಂತೆ ಸೂಚಿಸಿದರು.

ಮುರ್ಡೇಶ್ವರದಲ್ಲಿ ಕ್ರೂಸ್ ಶಿಪ್‌ ನಿಲುಗಡೆಗೆ ಕ್ರಮ
ಜಿಲ್ಲೆಗೆ ಅಂತಾರಾಷ್ಟ್ರೀಯ ಪ್ರವಾಸಿಗರು ಆಗಮಿಸಲು ಅನುಕೂಲವಾಗುವಂತೆ ಮುರ್ಡೇಶ್ವರದಲ್ಲಿ 360 ಕೋಟಿ ರೂ. ವೆಚ್ಚದಲ್ಲಿ ಬಂದರು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಅದರಲ್ಲಿ ಜಟ್ಟಿ, ಅಲೆ ತಡೆಗೋಡೆ ಕೂಡ ಬರಲಿದೆ. 500 ಬೋಟ್ ನಿಲ್ಲಿಸಬಹುದು. ಅಲ್ಲದೇ ಪ್ರವಾಸೋದ್ಯಮ ದೋಣಿಗಳನ್ನು, ಕ್ರೂಸ್‌ ಶಿಪ್‌ಗಳನ್ನು ನಿಲ್ಲಿಸಲು ಸಾಧ್ಯವಾಗಲಿದ್ದು, ಅವುಗಳ ಮೂಲಕ ಪ್ರವಾಸಿಗರು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಆಗಮಿಸಲು ಸಾಧ್ಯವಾಗಲಿದೆ ಎಂದು ಸಚಿವ ವೈದ್ಯ ತಿಳಿಸಿದರು.
ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಎಸ್‌ಪಿ ಎಂ.ನಾರಾಯಣ, ಡಿಎಫ್‌ಒ ರವಿಶಂಕರ್,ಎಸಿಗಳಾದ ಕನಿಷ್ಕ, ಕಾವ್ಯಾರಾಣಿ, ಡಾ.ನಯನಾ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜಯಂತ್ ಇದ್ದರು.


ಅಂಗನವಾಡಿ, ಶಾಲೆ ಅಭಿವೃದ್ಧಿಗೆ ಬಳಸಿ
ಜಿಲ್ಲೆಯಲ್ಲಿ ಗಣಿಗಾರಿಕೆಯಿಂದ ಬಂದ 8.59 ಕೋಟಿ ರಾಜಧನ ಜಿಲ್ಲಾ ಖನಿಜ ಪ್ರತಿಷ್ಠಾನದಲ್ಲಿದ್ದು, ಶಾಲೆ, ಅಂಗನವಾಡಿಗಳ ಅಭಿವೃದ್ಧಿಗೆ ಈ ಅನುದಾನ ಬಳಸಿ ಎಂದು ಸಚಿವ ಮಂಕಾಳ ವೈದ್ಯ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಖನಿಜ ಪ್ರತಿಷ್ಠಾನದ ಸಭೆ ನಡೆಸಿ ಅವರು ಮಾತನಾಡಿದರು. ಗಣಿಗಾರಿಕೆಗೆ ಹೆಚ್ಚಿರುವ ತಾಲೂಕುಗಳಲ್ಲೇ ಅದನ್ನು ಬಳಸಿ ಎಂದರು. ಕುಮಟಾ ಶಾಸಕ ದಿನಕರ ಶೆಟ್ಟಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net