

ಕಾರವಾರ :ಜಿಲ್ಲೆಯಲ್ಲಿ ಬರ ನಿರ್ವಹಣೆಯಲ್ಲಿ ತೊಂದರೆಯಾದರೆ ಅದಕ್ಕೆ ತಹಸೀಲ್ದಾರರು, ತಾಪಂ ಇಒಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಎಚ್ಚರಿಸಿದರು.
ಬರ ನಿರ್ವಹಣೆ ಸಂಬಂಧ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಪರಿಹಾರ ವಿತರಣೆ ಹಾಗೂ ಬರ ನಿರ್ವಹಣೆಗೆ ಬೇಕಾದ ಹಣವನ್ನು ಬಿಡುಗಡೆ ಮಾಡಲು ವ್ಯವಸ್ಥೆ ಮಾಡಲಾಗುವುದು. ಆದರೆ, ಅಧಿಕಾರಿಗಳು ಜವಾಬ್ದಾರಿಯಿಂದ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಬಿಲ್ ಬಾಕಿ ಆಕ್ಷೇಪ:
ಕಳೆದ ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿದ ಒಟ್ಟು 1.42 ಕೋಟಿ ರೂ. ಹಣ ಬಿಡುಗಡೆ ಟ್ಯಾಂಕರ್ ಮಾಲೀಕರಿಗೆ ನೀಡುವುದು ಬಾಕಿ ಇದೆ ಎಂಬ ವಿಷಯವನ್ನು ಅರಿತ ಸಚಿವರು ತಾಪಂ ಇಒಗಳನ್ನು ತರಾಟೆಗೆ ತೆಗೆದುಕೊಂಡರು. ಬಿಲ್‌ಗಳನ್ನು ಆಯಾ ಇಒಗಳೇ ಸ್ವತಃ ಕಟ್ಟುವಂತೆ ಕ್ರಮ ವಹಿಸಿ ಎಂದು ಜಿಲ್ಲಾಽಕಾರಿಗೆ ಸೂಚನೆ ನೀಡಿದರು. ಒಂದು ವಾರದಲ್ಲಿ ಎಲ್ಲ ಗ್ರಾಪಂಗಳಿಂದ ಬಿಲ್ ತರಿಸಿ ಅದನ್ನು ಗುತ್ತಿಗೆದಾರರಿಗೆ ಪಾವತಿಗೆ ಕ್ರಮ ವಹಿಸಬೇಕು ಎಂದು ಆದೇಶಿಸಿದರು.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮಾತನಾಡಿ, ಜಿಲ್ಲೆಯ ಮುಂಡಗೋಡ, ಶಿರಸಿ, ಯಲ್ಲಾಪುರ, ದಾಂಡೇಲಿ, ಮುಂಡಗೋಡ ಹಾಗೂ ಹಳಿಯಾಳ ತಾಲೂಕುಗಳನ್ನು ತೀವ್ರ ಬರ ಪೀಡಿತ ಎಂದು ಘೋಷಿಸಲಾಗಿದೆ. ಹೊನ್ನಾವರ ಹೊರತುಪಡಿಸಿ ಉಳಿದ 6 ತಾಲೂಕುಗಳನ್ನು ಸಾಮಾನ್ಯ ಬರ ಪೀಡಿತ ಎಂದು ಘೋಷಿಸಲಾಗಿದೆ. 14 ವಾರ ಮೇವಿನ ಸಮಸ್ಯೆಯಾಗದು ಎಂದು ಅಂದಾಜಿಸಲಾಗಿದೆ. ಜಿಲ್ಲೆಯ 109 ಗ್ರಾಪಂಗಳ 310 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಅಲ್ಲೆಲ್ಲ ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆಯಲು, ಇದ್ದ ಬೋರ್‌ವೆಲ್ ರಿಪೇರಿಗೆ ಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಒಟ್ಟಾರೆ 58 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. 95 ಸಾವಿರ ರೈತರ ಖಾತೆಗಳಿಗೆ 59 ಕೋಟಿ ರೂ. ನೇರವಾಗಿ ಜಮಾ ಮಾಡಲು ಈಗಾಗಲೇ ಪಟ್ಟಿ ಕಳಿಸಲಾಗಿದೆ. ಎನ್‌ಡಿಆರ್‌ಎಫ್ ಮಾನದಂಡದAತೆ ಪ್ರತಿ ಹೆಕ್ಟೇರ್‌ಗೆ 6800 ರೂ. ಬೆಳೆ ಹಾನಿ ಪರಿಹಾರ ಸಿಗಲಿದೆ ಎಂದು ತಿಳಿಸಿದರು. ಶಾಸಕ ಭೀಮಣ್ಣ ನಾಯ್ಕ ವೇದಿಕೆಯಲ್ಲಿದ್ದರು.
ಆಗದ ಎಫ್‌ಐಡಿ
ಜಿಲ್ಲೆಯ ಸುಮಾರು 1 ಲಕ್ಷಕ್ಕೂ ಅಧಿಕ ರೈತರು ಇದುವರೆಗೂ ಫ್ರೂಟ್ಸ್ ತಂತ್ರಾಂಶದಲ್ಲಿ ತಮ್ಮ ಹೆಸರು ದಾಖಲಿಸಿ ಎಫ್‌ಐಡಿ ಮಾಡಿಕೊಂಡಿಲ್ಲ. ಇನ್ನೂ ಕೆಲವರು ದಾಖಲಿಸಿದ್ದರೂ ತಮ್ಮ ಎಲ್ಲ ಜಮೀನನ್ನು ಎಫ್‌ಐಡಿಯಲ್ಲಿ ಸೇರಿಸಿಲ್ಲ. ಅಂಥವರಿಗೆ ಬರದ ಬೆಳೆ ಹಾನಿ ಪರಿಹಾರ ಬಾರದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೋವಿಂದ ಗೌಡ ತಿಳಿಸಿದರು.
ಜಿಲ್ಲೆಯಲ್ಲಿ ಜಮೀನುಗಳ ಜಂಟಿ ಖಾತೆಗಳ ಸಮಸ್ಯೆ ಇದೆ. ಎನ್‌ಎ ಆದ ಸುಮಾರು 20 ಸಾವಿರ ಜಾಗಗಳೂ ರೈತರ ಪಟ್ಟಿಯಲ್ಲಿ ಸೇರಿಕೊಂಡಿವೆ. ಮೃತಪಟ್ಟವರ ವಾರಸುದಾರರ ಹೆಸರಿಗೆ ಜಮೀನು ಹಸ್ತಾಂತರವಾಗಿಲ್ಲ. ಇಂಥ ಸಮಸ್ಯೆಗಳಿಂದ ಎಫ್‌ಐಡಿ ಆಗುತ್ತಿಲ್ಲ. ಗ್ರಾಮ ಲೆಕ್ಕಾಧಿಕಾರಿ, ಕೃಷಿ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳ ಜಂಟಿ ತಂಡ ರಚಿಸಿ ಪ್ರತಿ ಮನೆಗಳಿಗೆ ತೆರಳಿ ಅವರ ಪೂರ್ಣ ವಿವರನ್ನು ಎಫ್‌ಐಡಿಯಲ್ಲಿ ದಾಖಲಿಸುವಂತೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದರು. 15 ದಿನದಲ್ಲಿ ಎಲ್ಲ ರೈತರ ಎಫ್‌ಐಡಿ ಮಾಡಿಸುವಂತೆ ತಹಸೀಲ್ದಾರರಿಗೆ ಸಚಿವ ಮಂಕಾಳ ವೈದ್ಯ ಆದೇಶಿಸಿದರು.