ಸಂವಿಧಾನ ರಕ್ಷಿಸೋಣ, ಸಂವಿಧಾನ ತಿರುಳನ್ನು ನಾಡಿಗೆ ತಿಳಿಸೋಣ : ಹಂಸಲೇಖ

HCM
Published on

ಮೈಸೂರು: ಸಂವಿಧಾನದ ನೆರಳಿನಲ್ಲಿ ನಾನು ಸುಖವಾಗಿ ಬದುಕಿದ್ದೇವೆ, ಸಂವಿಧಾನ ನನ್ನ ಬದುಕನ್ನು ಬಂಗಾರವಾಗಿಸಿದೆ. ಇದೇ ರೀತಿ ಹಲವು ಜನರ ಬದುಕಿನಲ್ಲಿ ಭರವಸೆ ಮೂಡಿಸಿರುವ ಸಂವಿಧಾನವನ್ನು ರಕ್ಷಿಸುವ ಹಾಗೂ ಸಂವಿಧಾನದ ತಿರುಳನ್ನು ನಾಡಿಗೆ ತಿಳಿಸಿಕೊಡುವ ಕಾರ್ಯ ಆಗಬೇಕು ಎಂದು ಸಂಗೀತ ನಿರ್ದೇಶಕ ಡಾ.ಹಂಸಲೇಖ ಹೇಳಿದರು.

ನಗರದ ಕಲಾಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ರಚಿಸಿರುವ ‘ಸಂವಿಧಾನ ನೆರಳಲ್ಲಿ’ ಕೃತಿ ಬಿಡುಗಡೆ ಮಾಡಿ ಮಾತನಾಡಿ, ಸಂವಿಧಾನ ಎಂಬುದು ದೊಡ್ಡ ವೃಕ್ಷ. ಆ ವೃಕ್ಷದ ನೆರಳಿನಲ್ಲಿ ನಾವು ಕಣ್ಣುಬಿಟ್ಟು ಮಲಗಿ ಕನಸನ್ನು ಕಾಣಬೇಕು, ಆ ಕನಸು ಸಾಕಾರಗೊಳಿಸಲು ಪರಿಶ್ರಮ ಪಡೆಯಬೇಕು ಎಂದು ಕರೆ ನೀಡಿದರು.

ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚಿಸುವ ಮೂಲಕ ತಳಸಮುದಾಯಗಳು ಮೇಲೆ ಬರಲು ಅವಕಾಶ ಮಾಡಿಕೊಟ್ಟರು. ನಂತರ ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂಲಕ ಮುಂದೆ ಬರಲು ಕರೆ ನೀಡಿದರು. ಈ ಮೂರು ಅಂಶದ ಲಾಭವನ್ನು ನಾವೆಲ್ಲರು ಇಂದು ಪಡೆದಿದ್ದೇವೆ. ನಾನು ಈ ಹಿಂದೆ ಊಟದ ಬಗ್ಗೆ ಆಡಿದ ಮಾತು ವಿವಾದಕ್ಕೆ ಕಾರಣವಾಗಿತ್ತು. ಆ ಸಂದರ್ಭ ದೊಡ್ಡ ಸಂಖ್ಯೆಯಲ್ಲಿ ಜನರು ಬೆಂಬಲಕ್ಕೆ ನಿಂತರು. ಆ ಸಂದರ್ಭ ನನ್ನನ್ನು ರಕ್ಷಿಸಿದ್ದು ಸಂವಿಧಾನ ಹಾಗೂ ಭೀಮ ಪರಿವಾರ ಎಂದು ಹೇಳಿದರು.

ವಿಮರ್ಶಕ ಡಾ.ಕೆ.ವೈ. ನಾರಾಯಣಸ್ವಾಮಿ ಮಾತನಾಡಿ, ಮಹದೇವಪ್ಪ ಯಾವುದೇ ರಾಜಕೀಯ ಲೆಕ್ಕಾಚಾರ ಇಲ್ಲದೆ ಈ ಕೃತಿ ರಚಿಸಿದ್ದಾರೆ. ಈ ಕೃತಿಯಲ್ಲಿ ಪ್ರಸ್ತಾಪವಾಗುವ ವಿಷಯದಿಂದ ಏನು ಪರಿಣಾಮ ಆಗಬಹುದು? ಸಮಾಜ ಆ ವಿಷಯಗಳನ್ನು ಯಾವ ರೀತಿ ಸ್ವೀಕಾರ ಮಾಡಬಹುದು ? ಎಂಬ ಲೆಕ್ಕಾಚಾರವನ್ನು ಗಣನೆಗೆ ತೆಗೆದುಕೊಳ್ಳದೆ ಕೃತಿ ರಚಿಸಿದ್ದಾರೆ. ಹಿಜಾಬ್, ಕೋಮುವಾದ, ಜಾತಿ ವಿಷವರ್ತುಲ, ಅನುಕೂಲಸಿಂಧು ರಾಜಕಾರಣ ವಿಷಯವನ್ನೂ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಸಂವಿಧಾನದ ನೆರಳಿನಲ್ಲಿ ಕೃತಿಯನ್ನು ಯುವ ಸಮುದಾಯ ಓದಿ ವಿಮರ್ಶೆಗೆ ಒಳಪಡಿಸಬೇಕು. ದೇಶದ ಜನರಿಗೆ ಸಂವಿಧಾನ ರಕ್ಷಣೆಯಾಗಿ ನಿಂತಿದೆ. ನನಗೆ ವೈಯುಕ್ತಿಕವಾಗಿ ಉಂಟಾಗಿರುವ ಅನುಭವಗಳನ್ನು ಕೃತಿಯಲ್ಲಿ ದಾಖಲಿಸಿದ್ದೇನೆ ಎಂದರು. ವೇದಿಕೆಯಲ್ಲಿ ಸಾಹಿತಿ ಬಂಜಗೆರೆ ಜಯಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net