ವರಕೋಡು ಮುರಾರ್ಜಿ ವಸತಿ ಶಾಲೆಗೆ ಸಚಿವ ಮಹದೇವಪ್ಪ ಭೇಟಿ

11
Published on

ಸಮಾಜ ಕಲ್ಯಾಣ ಇಲಾಖೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಗುರುವಾರ ವರಕೋಡು ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿ ಶಾಲೆಯ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು.

ಈ ವೇಳೆ ಶಾಲೆಯ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕಲಿಕೆಗೆ ಅನುಗುಣವಾಗಿರುವ ಸೌಲಭ್ಯಗಳನ್ನು ವೀಕ್ಷಿಸಿದರು. ವಿದ್ಯಾರ್ಥಿ ನಿಲಯದ ಶೌಚಗೃಹ ಪರಿಶೀಲಿಸಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.

ಬಳಿಕ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೊಂದಿಗೆ ಪಠ್ಯದ ಬಗ್ಗೆ ಚರ್ಚೆ ನಡೆಸಿದರು. ಜತೆಗೆ ಜನಸಂಖ್ಯೆ ಸ್ಫೋಟದಿಂದ ಆರೋಗ್ಯ, ಶಿಕ್ಷಣ, ನಿರುದ್ಯೋಗ ಮೇಲೆ ಉಂಟಾಗುವ ಪ್ರತಿಕೂಲ ಪರಿಣಾಮವನ್ನು ವಿವರಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಾಂಶುಪಾಲರು ಮತ್ತು ಶಿಕ್ಷಕರೊಂದಿಗೆ ಚರ್ಚಿಸಿ, ವಿದ್ಯಾರ್ಥಿಗಳಿಗೆ ಕಲಿಕೆ ಜತೆಗೆ ಬದುಕನ್ನು ಕಟ್ಟಿಕೊಳ್ಳುವ ಕೌಶಲವನ್ನು ತಿಳಿಸಿಕೊಡಬೇಕು. ಕಳೆದ ಬಾರಿಗಿಂತ ಈ ಸಾಲಿನಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವಂತೆ ವಿದ್ಯಾರ್ಥಿಗಳಿಗೆ ಕಲಿಸಬೇಕು ಎಂದು ಸೂಚಿಸಿದರು.
ಅಡುಗೆ ಕೋಣೆಗೆ ಭೇಟಿ ನೀಡಿ ಸಚಿವರು, ಅಡುಗೆ ಸಿಬ್ಬಂದಿ ಸ್ವಚ್ಛವಾಗಿರಬೇಕು. ಕೊಣೆಯನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದು ಸೂಚಿಸಿ, ಹುರುಳಿ ಕಾಳಿನ ಪಲ್ಯವನ್ನು ಸವಿದರು.

ಶಾಲೆ ಆವರಣದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪೌಷ್ಟಿಕ ಕೈತೋಟ ನಿರ್ಮಿಸಿ, ವಿದ್ಯಾರ್ಥಿ ನಿಲಯಕ್ಕೆ ಅಗತ್ಯವಿರುವ ಸೊಪ್ಪು, ತರಕಾರಿಗಳನ್ನು ಬೆಳೆಯಬೇಕು. ಈ ಮೂಲಕ ಮಕ್ಕಳಿಗೆ ಪ್ರತಿದಿನವೂ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡಲು ಕ್ರಮವಹಿಸಬೇಕು ಎಂದರು.
ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಪೂರಕವಾಗಿರುವ ಎಲ್ಲ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸಲಾಗುವುದು. ಕಲಿಕೆಯಿಂದ ಯಾವುದೇ ಮಕ್ಕಳು ವಂಚಿತರಾಗಬಾರದು. ಪ್ರತಿಯೊಬ್ಬರೂ ಶಿಕ್ಷಣದಿಂದ ಜ್ಞಾನವಂತರಾಗಿ ಸಮಾಜದಲ್ಲಿ ಉತ್ತಮವಾದ ಜೀವನ ನಡೆಸಬೇಕು ಎಂದು ಸಚಿವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net