ಒಂದು ಸೈಟ್‌ಗೋಸ್ಕರ ಯಾರಾದರು ಪಾದಯಾತ್ರೆ ಮಾಡುತ್ತಾರಾ? ಬಿಜೆಪಿ ವಿರುದ್ಧ ಸಚಿವ ಮಹದೇವಪ್ಪ ಕಿಡಿ

Mahadevappa
Published on

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತಹ ಮಹಾನಾಯಕರ ಜತೆ ಕೆಲಸ ಮಾಡುವ ಸೌಭಾಗ್ಯ ಕ್ಷೇತ್ರದ ಜನ ನನಗೆ ಕಲ್ಪಿಸಿ ಕೊಟ್ಟಿದ್ದಾರೆ, ನಾನು ಇದಕ್ಕೆ ಕ್ಷೇತ್ರದ ಜನರಿಗೆ ಋಣಿಯಾಗಿದ್ದೇನೆ. ಅಭಿವೃದ್ಧಿ ಕಾರ್ಯಗಳ ಮೂಲಕ ಕ್ಷೇತ್ರದ ಜನರ ಋಣ ತೀರಿಸುತ್ತಿದ್ದೇನೆ. ಅಭಿವೃದ್ಧಿಗೆ ಹಣ ಎಲ್ಲಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪ್ರಶ್ನಿಸುತ್ತಿದ್ದರು. ಆದರೆ, ನಾವು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ಸೋಸಲೆ ಹೋಬಳಿಯ ಹೊರಳಹಳ್ಳಿ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ಆವರಣದಲ್ಲಿ ಬುಧವಾರ ತಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ 470 ಕೋಟಿ ರೂ.ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ, ಕಟ್ಟಡಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿದು ಅವರನ್ನು ಅಧಿಕಾರಕ್ಕೆ ಕೆಳಗಿಳಿಸುವ ಪ್ರಯತ್ನ ನಡೆಯುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವ ವಿಚಾರವೇ? ಇದು ಅತ್ಯಂತ ಕರಾಳ ದಿನವಾಗಿದೆ. ಒಂದು ಸೈಟ್‌ಗೋಸ್ಕರ ಯಾರಾದರೂ ಪಾದಯಾತ್ರೆ ಮಾಡುತ್ತಾರಾ? ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸೈಟ್ ವಿಚಾರ ಮುಂದಿಟ್ಟುಕೊಂಡು ಪಾದಯಾತ್ರೆ ನಡೆಸಿದರು. ಪ್ರವಾಹ ಬಂದ ಸಂದರ್ಭದಲ್ಲಿ ಅವರು ಜನರ ಕಷ್ಟಗಳಿಗೆ ಸ್ಪಂದಿಸಿ ಪಾದಯಾತ್ರೆ ಮಾಡುವ ಗೋಜಿಗೆ ಹೋಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಲ್ಪಸಂಖ್ಯಾತರು ಈ ದೇಶದ ಬಹುಸಂಖ್ಯಾತರ ಮೇಲೆ ನಂಬಿಕೆ ಹಾಗೂ ಭರವಸೆ ಇಟ್ಟಿದ್ದಾರೆ. ಹಾಗಾಗಿ ಅವರ ರಕ್ಷಣೆ ಹೊಣೆಗಾರಿಕೆ ನಮ್ಮೆಲ್ಲರ ಕರ್ತವ್ಯ’ ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದಾರೆ. ಸಂವಿಧಾನ ಹಾಗೂ ಅಂಬೇಡ್ಕರ್ ಬಗ್ಗೆ ಮಾತನಾಡುವ ಬಿಜೆಪಿ ನಾಯಕರಿಗೆ ಅಂಬೇಡ್ಕರ್ ಆಡಿರುವ ಮಾತು ತಿಳಿದಿಲ್ಲವೇ? ಹೀಗಿದ್ದರೂ ಅಲ್ಪಸಂಖ್ಯಾತರನ್ನು ನೀವು ಅಲ್ಲಿಯವರು, ಇಲ್ಲಿಯವರು, ಅಲ್ಲಿಗೆ ಹೋಗಿ ಇಲ್ಲಿಗೆ ಹೋಗಿ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ? ದೇಶದಲ್ಲಿ ವಾಸ ಮಾಡುತ್ತಿರುವವರು ಪ್ರತಿಯೊಬ್ಬರೂ ಭಾರತೀಯರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net