

ಕೊಳ್ಳೇಗಾಲ: ಸಚಿವ ಎಚ್.ಸಿ.ಮಹದೇವಪ್ಪ ಅವರನ್ನು ರಾಜಕೀಯವಾಗಿ ಟಾರ್ಗೆಟ್ ಮಾಡಲಾಗುತ್ತಿದ್ದು, ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಭಾಸ್ಕರ್ ಪ್ರಸಾದ್ ಅವರು ಮಹದೇವಪ್ಪ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಅಸಮಾಧಾನ ಹೊರಹಾಕಿದರು.
ಎಚ್.ಸಿ.ಮಹದೇವಪ್ಪ ಅವರ ವಿರುದ್ಧ ಭಾಸ್ಕರ್ ಪ್ರಸಾದ್ ನೇತೃತ್ವದ ತಂಡ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿರುವ ವಿಡಿಯೋವನ್ನು ವೈರಲ್ ಮಾಡಲಾಗುತ್ತಿದೆ. ಈ ನಡೆ ಸರಿಯಲ್ಲ. ಒಳ ಮೀಸಲಾತಿ ವಿಚಾರವಾಗಿ ಮಹದೇವಪ್ಪ ಅವರೊಬ್ಬರೇ ನಿರ್ಧಾರ ಮಾಡಿಲ್ಲ. ಬದಲಾಗಿ ಇಡೀ ಸರ್ಕಾರ ತೀರ್ಮಾನ ಕೈಗೊಂಡಿದೆ. ಆದರೆ ರಾಜಕೀಯವಾಗಿ ಮಹದೇವಪ್ಪ ಅವರನ್ನ ಟಾರ್ಗೆಟ್ ಮಾಡಲಾ ಗುತ್ತಿರುವುದು ಖಂಡನೀಯ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಮಹದೇವಪ್ಪ ಅವರ ಮೇಲೆ ಮಾಡುತ್ತಿರುವ ಸುಳ್ಳು ಆರೋಪಗಳನ್ನು ಕೂಡಲೇ ನಿಲ್ಲಿಸಬೇಕು. ಪರಿಶಿಷ್ಟ ಜಾತಿಯ ಬಲಗೈ ಹಾಗೂ ಎಡಗೈ ಸಮುದಾಯ ಜನರು ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದಾರೆ. ಭಾಸ್ಕರ್ ಪ್ರಸಾದ್ ಅವರು ಈ ಎರಡೂ ಸಮುದಾಯಗಳ ನಡುವೆ ಕಂದಕ ಉಂಟು ಮಾಡುತ್ತಿದ್ದಾರೆ. ಯಾವುದೇ ಬೇಡಿಕೆ ಇದ್ದರೂ ಸರ್ಕಾರದ ಮುಂದೆ ನ್ಯಾಯ ಸಮ್ಮತವಾಗಿ ಶಾಂತ ರೀತಿಯಲ್ಲಿ ಕೇಳಲಿ ಎಂದರು.
ನಗರಸಭೆ ಸದಸ್ಯರಾದ ಶಾಂತ ರಾಜು ಬಸ್ತೀಪುರ, ಪ್ರಕಾಶ್ ಶಂಕನಪುರ, ರಾಘವೇಂದ್ರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.