ಮಾಧ್ಯಮಗಳ ವಿರುದ್ಧ ಸಿಡಿಮಿಡಿಗೊಂಡ ಸಚಿವ ಮಹದೇವಪ್ಪ

Mahadevappa
Published on

ಮೈಸೂರು: ತಿ.ನರಸೀಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಣ್ಣ ನೀರಾವರಿ ಇಲಾಖೆಯ ಇಬ್ಬರು ಗುತ್ತಿಗೆ ನೌಕರರನ್ನು ಕೆಲಸದಿಂದ ಕೈಬಿಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶನಿವಾರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸಿಡಿಮಿಡಿಗೊಂಡರು.

ನನ್ನ ಮಗ ಸುನಿಲ್ ಬೋಸ್ ನಿರ್ದೇಶನದ ಮೇರೆಗೆ ಇಬ್ಬರು ಗುತ್ತಿಗೆ ನೌಕರರನ್ನು ಕೆಲಸದಿಂದ ಕೈ ಬಿಡಲಾಗಿದೆ ಎಂಬುದು ಆಧಾರ ರಹಿತ ಆರೋಪ. ಯಾರ್ ರೀ ಇದನ್ನೆಲ್ಲ ಹೇಳಿದ್ದು, ಬೇಸ್‌ಲೆಸ್ ಆರೋಪಗಳನ್ನೆಲ್ಲ ಬಂದು ಕೇಳುತ್ತಿರಲ್ಲ. ತಿ.ನರಸೀಪುರ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ವೈಷಮ್ಯ ಇಲ್ಲ ಎಂದು ಹೇಳಿದರು.

ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸುನಿಲ್ ಬೋಸ್, ನಾನು ಯಾರನ್ನೂ ಕೆಲಸದಿಂದ ತೆಗೆಯುವಂತೆ ಹೇಳಿಲ್ಲ. ಇಲಾಖೆ ಅಧಿಕಾರಿ ಏತಕೋಸ್ಕರ ನನ್ನ ಹೆಸರು ಹೇಳಿದ್ದಾರೋ ಗೊತ್ತಿಲ್ಲ, ಈ ಬಗ್ಗೆ ಅವರಿಂದಲೇ ಸ್ಪಷ್ಟನೆ ಬಯಸುತ್ತೇನೆ ಎಂದರು.

ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಸಂದರ್ಭ ಕಾಲಮಿತಿ ನಿಗದಿ ಪಡಿಸಲಾಗಿರುತ್ತದೆ. ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಕೆಲಸದಿಂದ ಕೈಬಿಟ್ಟಿರಬಹುದು. ಗುತ್ತಿಗೆ ನೌಕರರನ್ನು ಉಳಿಸಿಕೊಳ್ಳುವುದು ಬಿಡುವುದು ಅಧಿಕಾರಿಗೆ ಬಿಟ್ಟ ವಿಚಾರ, ಈ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಚುನಾವಣೆಯಲ್ಲಿ ಪ್ರತಿ ಮನೆಗೆ ತೆರಳಿ ತಂದೆಯನ್ನು ಗೆಲ್ಲಿಸಿದ್ದೇನೆ. ಹಾಗಾಗಿ ಜನರ ಕೆಲಸ ಮಾಡುವುದು ನನ್ನ ಜವಾಬ್ದಾರಿ. ಆ ಕೆಲಸವನ್ನು ಮಾತ್ರ ನಾನು ಮಾಡುತ್ತಿದ್ದೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net