ಮುಖ್ಯಮಂತ್ರಿ ಜತೆ ಸಚಿವ ಮಾಧುಸ್ವಾಮಿ ವಿಡಿಯೋ ಕಾನ್ಫರೆನ್ಸ್

27Tmk_JCM_CM
Published on

ತುಮಕೂರು: ಜಿಲ್ಲೆಯಲ್ಲಿ 3 ಕರೊನಾ ಪಾಸಿಟಿವ್ ಪ್ರಕರಣ ಬಂದ ಹಿನ್ನೆಲೆಯಲ್ಲಿ ತುಮಕೂರು, ಶಿರಾ, ತಿಪಟೂರು ಹಾಗೂ ಪಾವಗಡ ತಾಲೂಕುಗಳನ್ನು ಹೊರತುಪಡಿಸಿ ಬೇರೆ ತಾಲೂಕುಗಳಲ್ಲಿ ಕೃಷಿ, ಉದ್ಯೋಗ ಖಾತ್ರಿ ಯೋಜನೆ ಮತ್ತು ಗ್ರಾಮೀಣ ಭಾಗದಲ್ಲಿ ಕೈಗಾರಿಕೆಗಳ ಕಾರ್ಯ ಚಟುವಟಿಕೆಗಳನ್ನು ಸ್ಥಳೀಯ (ಶೇ.33 ರಿಂದ 50 ಪ್ರಮಾಣ) ಕಾರ್ಮಿಕರಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂಗೆ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಂಜೆ ಸಿಎಂ ಯಡಿಯೂರಪ್ಪ ಅವರೊಂದಿಗೆ ಸಂವಾದದಲ್ಲಿ ಭಾಗವಹಿಸಿದ ಅವರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಂದ ಮನೆಮನೆಗೆ ತೆರಳಿ ಜ್ವರ, ನೆಗಡಿ, ಕೆಮ್ಮು ಇರುವುದರ ಕುರಿತು ಆರಂಭದಲ್ಲಿಯೇ ಸರ್ವೇ ಮಾಡಿಸಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಜಿಲ್ಲೆಯು ಗ್ರೀನ್ ರೆನ್‌ಗೆ ಹತ್ತಿರವಾಗಿದ್ದು, ಇತ್ತೀಚೆಗೆ ತುಮಕೂರು ನಗರದಲ್ಲಿ ಒಂದು ಕರೊನಾ ಪಾಸಿಟಿವ್ ಕಂಡು ಬಂದಿದೆ. ನಗರದ ಕೆಲವು ಪ್ರದೇಶಗಳನ್ನು ಬಫರ್‌ರೆನ್ ತೀವ್ರ ನಿಗಾ ಪ್ರದೇಶಗಳೆಂದು ಘೋಷಿಸಿ, ಆ ಪ್ರದೇಶಗಳನ್ನು ಕಟ್ಟುನಿಟ್ಟಿನ ನಿಗಾದಲ್ಲಿ ಇಡಲಾಗಿದೆ ಎಂದು ಸಚಿವರು ತಿಳಿಸಿದರು.

ತುಮಕೂರಿನಲ್ಲಿ ಕೈಗಾರಿಕಾ ಚಟುವಟಿಕೆ ಆರಂಭಿಸಲು ನೆರೆಯ ಜಿಲ್ಲೆಗಳಿಂದ ಸಿಬ್ಬಂದಿ ಹಾಗೂ ಕಾರ್ಮಿಕರು ಬರಬೇಕಾಗಿದೆ ಎಂದು ಕೈಗಾರಿಕೆಗಳ ಮಾಲೀಕರು ಹೇಳುತ್ತಿದ್ದು, ಬೇರೆ ಜಿಲ್ಲೆಯಿಂದ ಈ ಜಿಲ್ಲೆಗೆ ಕಾರ್ಮಿಕರು, ಸಿಬ್ಬಂದಿ ಬರುವುದನ್ನು ಕಟ್ಟುನಿಟ್ಟಾಗಿ ಜಿಲ್ಲಾಡಳಿತದಿಂದ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮಾಹಿತಿ ನೀಡಿದರು. ತುಮಕೂರು ಗ್ರೀನ್‌ರೆನ್ ಆಗಲು ಇನ್ನು ಮೇ 3ರವರೆಗೆ ಕಾಲಾವಕಾಶ ಬೇಕಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಪ್ರಾರಂಭಿಸಲು ಕಷ್ಟವಾಗಿದೆ. ಆರ್ಥಿಕ ಚಟುವಟಿಕೆ ಕೈಗೊಳ್ಳಲು ಜಿಲ್ಲಾಡಳಿತದಿಂದ ನಿರ್ಬಂಧಗೊಳಿಸಲಾಗಿಲ್ಲ ಎಂದು ಮಾಧುಸ್ವಾಮಿ ಸಿಎಂಗೆ ತಿಳಿಸಿದರು.

ಶಿರಾ ಸೇರಿ ಮಧುಗಿರಿ ಉಪವಿಭಾಗದ ತಾಲೂಕುಗಳು ಆಂಧ್ರದ ಗಡಿಗಳಿಗೆ ಹೊಂದಿಕೊಂಡಂತೆ ಇದ್ದು, ಹಿಂದುಪುರದಲ್ಲಿ ಕರೊನಾ ಪ್ರಕರಣ ಹೆಚ್ಚಾಗಿವೆ. ಈ ಭಾಗದಲ್ಲಿ ವ್ಯಾಪಕ ಬಿಗಿ ಕ್ರಮವಹಿಸಲಾಗಿದೆ. ತುಮಕೂರು ನಗರ, ಶಿರಾ ಸೇರಿ ಸೋಂಕು ತಗುಲುವ ವಾತಾವರಣವಿರುವ ತಾಲೂಕುಗಳನ್ನು ಹೊರತುಪಡಿಸಿ ಜಿಲ್ಲೆಯ ಇನ್ನಿತರ ತಾಲೂಕುಗಳಲ್ಲಿ ವಿನಾಯಿತಿ ನೀಡಲು ಸಿದ್ಧರಿದ್ದೇವೆ ಎಂದು ಸಚಿವರು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ , ಜಿಪಂ ಸಿಇಒ ಶುಭಾ ಕಲ್ಯಾಣ್, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಆರ್.ಚಂದ್ರಿಕಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net