ಕೌಶಲ ಪಡೆಯುವತ್ತ ಇರಲಿ ಚಿತ್ತ : ಸಚಿವ ಜೆ.ಸಿ.ಮಾಧುಸ್ವಾಮಿ

DSC_6849
Published on

ತುಮಕೂರು: ಅಂಗವಿಕಲರಿಗೂ ಸಮಾಜದಲ್ಲಿ ಸಮಾನ ಅವಕಾಶಗಳು ಸಿಕ್ಕಿ ಎಲ್ಲರಂತೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಕೌಶಲ ತರಬೇತಿ ಕೇಂದ್ರ ತುಮಕೂರಿನಲ್ಲಿ ಆರಂಭಿಸುತ್ತಿರುವ ಇನ್ಫೋಸಿಸ್ ಸಂಸ್ಥೆಯ ಕಾರ್ಯ ಮಾದರಿ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ನಗರ ಹೊರವಲಯದ ಬೆಳಗುಂಬದ ವಾಕ್ ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆ ಆವರಣದಲ್ಲಿ ಗುರುವಾರ ಅಂಗವಿಕಲರ ಕೌಶಲ ತರಬೇತಿ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಪ್ರಸ್ತುತ ಕೈಗಾರಿಕೆಗಳು ತುಮಕೂರು ಸೇರಿ ಜಿಲ್ಲಾ ಕೇಂದ್ರಗಳತ್ತ ತಿರುಗಿ ನೋಡುತ್ತಿವೆ, ಸ್ಥಳೀಯ ಅಭ್ಯರ್ಥಿಗಳಲ್ಲಿಯೇ ಕೌಶಲವಿದ್ದರೆ ಕರೆದು ಕೆಲಸ ಕೂಡ ನೀಡುತ್ತಾರೆ, ಇದಕ್ಕೆ ಅಗತ್ಯವಾದ ಕೌಶಲವನ್ನು ಎಲ್ಲರೂ ಪಡೆಯುವ ನಿಟ್ಟಿನಲ್ಲಿ ಚಿಂತಿಸಬೇಕು ಎಂದರು.

ರಾಮಕೃಷ್ಣ ಆಶ್ರಮದ ಡಾ.ಸ್ವಾಮಿ ವೀರೇಶಾನಂದ ಸರಸ್ವತಿ ಮಾತನಾಡಿ, ಸೇವೆ ಪ್ರತಿಯೊಬ್ಬರ ಜೀವನ ಪದ್ಧತಿಯಾಗಬೇಕು. ಉಸಿರಾಟದಂತೆ ನಿತ್ಯ ಪ್ರಕ್ರಿಯೆಯಾಗಬೇಕು. ಅಸಹಾಯಕರು, ನೆರವಿನ ಅಗತ್ಯವಿರುವವರಿಗೆ ಸಹಾಯಾಸ್ತ ಚಾಚುವ ಮಾನವೀಯ ಮನೋಭಾವ ಬೆಳೆೆಯಬೇಕು ಎಂದರು.

ಸ್ವಯಂ ಪ್ರೇರಿತ ಸೇವೆಯಲ್ಲಿ ರೆಡ್ ಕ್ರಾಸ್ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದೆ. ವಿಶ್ವ ಯುದ್ಧಗಳ ಸಂದರ್ಭದಲ್ಲಿ ರೆಡ್‌ಕ್ರಾಸ್ ಯುದ್ಧದ ಗಾಯಾಳುಗಳಿಗೆ ತಾರತಮ್ಯವಿಲ್ಲದೆ ಶುಶ್ರೂಷೆ ಮಾಡಿ ಮಾನವೀಯತೆ ಮೆರೆದಿದೆ ಎಂದು ಸ್ಮರಿಸಿದರು.

ಇನ್ಫೋಸಿಸ್ ಫೌಂಡೇಷನ್ ಉಪಾಧ್ಯಕ್ಷ ರಾಮದಾಸ್ ಕಾಮತ್ ಮಾತನಾಡಿ, ಪ್ರಚಾರಕ್ಕಾಗಿ ಮಾಡುವುದು ಸೇವೆಯಾಗದು, ರೆಡ್‌ಕ್ರಾಸ್ ಸಂಸ್ಥೆಯ ಸೇವಾ ಕಾರ್ಯಗಳು ಇವತ್ತಿಗೂ ಬಹಳಷ್ಟು ಜನರಿಗೆ ಗೊತ್ತಿಲ್ಲ. ಗೊತ್ತಾಗುವುದು ಸಂಸ್ಥೆಯ ಉದ್ದೇಶವಲ್ಲ, ಸೇವೆಯೇ ಇದರ ಗುರಿ, ಧ್ಯೇಯ. ಸಂಸ್ಥೆಯವರು ತಮ್ಮ ಹಣ, ಶ್ರಮ ಹಾಕಿ ಮಾಡುವ ಈ ಸೇವಾಕಾರ್ಯ ಶ್ರೇಷ್ಠ ಎಂದರು.

ಶಾಸಕ ಡಿ.ಸಿ.ಗೌರಿಶಂಕರ್, ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಬೆಳಗುಂಬ ಗ್ರಾಪಂ ಅಧ್ಯಕ್ಷೆ ಮಂಗಳಗೌರಮ್ಮ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಘಟಕದ ಚೇರ್ಮನ್ ಎಸ್.ನಾಗಣ್ಣ, ಉಪಾಧ್ಯಕ್ಷ ಎಂ.ಕೆ.ಶ್ರೀಧರ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಪಂ ಸಿಇಒ ಶುಭಾ ಕಲ್ಯಾಣ್, ಎಸ್ಪಿ ಡಾ.ಕೆ.ವಂಶಿಕೃಷ್ಣ ಇದ್ದರು.

ಅಂಗವಿಕಲರು ವಿದ್ಯಾಭ್ಯಾಸ ಮುಗಿದ ನಂತರ ಅಸಹಾಯಕರಾಗಿ ಭಿಕ್ಷೆ ಬೇಡುವಂತಾಗಬಾರದು, ಸ್ವಾವಲಂಬಿಗಳಾಗಿ ತಮ್ಮಕಾಲ ಮೇಲೆ ತಾವು ನಿಂತು ಬಾಳುವ ವ್ಯವಸ್ಥೆ ಆಗಬೇಕು. ಅದರ ಪ್ರಯತ್ನವಾಗಿಯೇ ಕೌಶಲ ಕೇಂದ್ರ ತುಮಕೂರಿನಲ್ಲಿ ಆರಂಭವಾಗಿದೆ. ರಾಮದಾಸ್ ಕಾಮತ್ ಇನ್ಫೋಸಿಸ್ ಫೌಂಡೇಷನ್ ಉಪಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net