

ತುಮಕೂರು: ಕರೊನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯದೊಳಗಡೆ ಹುಣಸೆಹಣ್ಣು ಹಾಗೂ ಕೊಬ್ಬರಿ ಮಾರಾಟ ಮಾಡಲು ಅವಕಾಶವಿದೆ. ಆದರೆ, ಹೊರ ರಾಜ್ಯಗಳಿಗೆ ಮಾರಾಟ ಮಾಡಲು ಅವಕಾಶವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಕರೊನಾ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಮಹಾರಾಷ್ಟ್ರ, ತಮಿಳುನಾಡು, ಕೇರಳ ಸೇರಿ ನೆರೆ ರಾಜ್ಯಗಳಲ್ಲಿ ಕರೊನಾ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಹೊರರಾಜ್ಯಗಳಿಗೆ ಕೊಬ್ಬರಿ ಹಾಗೂ ಹುಣಸೆಹಣ್ಣನ್ನು ಜಿಲ್ಲೆಯಿಂದ ವ್ಯಾಪಾರ ಮಾಡಲು ಅವಕಾಶ ನೀಡುತ್ತಿಲ್ಲ. ನಮ್ಮ ರಾಜ್ಯದೊಳಗೆ ವ್ಯಾಪಾರ ಮಾಡಿಕೊಳ್ಳಲಿ ಎಂದರು.
ಹಾಲಿಗೆ ಬೇಡಿಕೆ: ಪಾವಗಡ, ಶಿರಾ ತಾಲೂಕಿನಲ್ಲಿ ಹಾಲಿಗೆ ಬೇಡಿಕೆ ಬಂದಿದ್ದು, ಸರ್ಕಾರದ ವತಿಯಿಂದ ಕೊಳಚೆ ಪ್ರದೇಶದ ನಿವಾಸಿಗಳು, ಬಡವರಿಗೆ ನೀಡುತ್ತಿರುವ ಹಾಲನ್ನು ಸಮರ್ಪಕವಾಗಿ ವಿತರಿಸಲು ಕ್ರಮವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವ ಮಾಧುಸ್ವಾಮಿ ನಿರ್ದೇಶನ ನೀಡಿದರು.
ಕುಣಿಗಲ್ ಮತ್ತು ತುರುವೇಕೆರೆ ಸೇರಿ ಜಿಲ್ಲೆಯ ಕೆಲ ಭಾಗದಲ್ಲಿ ಮೀನಿನ ಪೂರೈಕೆ ಇದೆ. ಈ ಭಾಗದಿಂದ ಜಿಲ್ಲೆಯ ಇತರ ಭಾಗಕ್ಕೆ ಸಾಗಾಟ ಮಾಡಲು ಅಡ್ಡಿಪಡಿಸುವುದು ಬೇಡ. ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದರು. ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಿ, ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟುಹೋಗುತ್ತಿದೆ. ಜಿಲ್ಲೆಯಲ್ಲಿ ಹೊಸ ಟ್ರಾನ್ಸ್‌ಫಾರ್ಮರ್‌ಗಳ ಅಳವಡಿಕೆ ಮಾಡಿ ಎಂದು ಸಚಿವರು ಬೆಸ್ಕಾಂ ಇಂಜಿನಿಯರ್‌ಗೆ ಆದೇಶಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಶುಭಾಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ, ಡಿಎಚ್‌ಒ ಡಾ.ಬಿ.ಆರ್.ಚಂದ್ರಿಕಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.