

ಉಡುಪಿ: ದೇಶವ್ಯಾಪಿ ಲಸಿಕಾಕರಣ ಯೋಜನೆ ಜಾರಿಗೆ ಅಪಾರ ಹಣ ವೆಚ್ಚವಾಗುತ್ತದೆ. ಹೀಗಾಗಿ ಕಾಂಗ್ರೆಸ್ ವಿರೋಧಕ್ಕಾಗಿ ವಿರೋಧ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಲಸಿಕೆ ವಿತರಣೆ ಬೋಗಸ್ ಪಾಪದ ಮಾತು ಒಳ್ಳೆಯದಲ್ಲ. ನೈಸರ್ಗಿಕ ಆಪತ್ತನ್ನು ಎಲ್ಲರೂ ಒಟ್ಟಾಗಿ ದರಿಸಬೇಕು ಎಂದು ಸಣ್ಣ ನೀರಾವರಿ ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
80 ಕೋಟಿ ಜನರಿಗೆ ಉಚಿತ ಲಸಿಕೆ ನೀಡುವುದು ಸಾಮಾನ್ಯ ಮಾತಲ್ಲ. ಕರ್ನಾಟಕ ಸರಕಾರಕ್ಕೆ 2000 ಕೋಟಿ ರೂ. ಅಗತ್ಯವಿದೆ. ಲಸಿಕೆ ತಯಾರಿಸುವ ಕಂಪನಿಗೆ ಸಮಯಾವಕಾಶ ಬೇಕಾಗುತ್ತದೆಎಂಬುದನ್ನು ಕಾಂಗ್ರೆಸ್ ಅರ್ಥಮಾಡಿಕೊಳ್ಳಬೇಕು ಎಂದರು.
ಜಾರಕಿಹೊಳಿ ರಾಜೀನಾಮೆ ಅಗತ್ಯವಿಲ್ಲ
ಜಾರಕಿಹೊಳಿ ಮಹತ್ವದ ರಾಜಕೀಯ ನಿರ್ಧಾರ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು,
ಜಾರಕಿಹೊಳಿ ಅವರಿಗೆ ಸರಕಾರ ಮತ್ತು ಪಕ್ಷದ ಕಡೆಯಿಂದ ಏನು ತೊಂದರೆಯಾಗಿಲ್ಲ. ಆಕಸ್ಮಿಕವಾದ ಘಟನೆಗೆ ಅವರು ಬಲಿಯಾಗಿದ್ದಾರೆ. ನಾವೆಲ್ಲ ಅವರ ಬಗ್ಗೆ ಅನುಕಂಪ ಇಟ್ಟುಕೊಂಡಿದ್ದೇವೆ. ಇದು ಕಾನೂನಾತ್ಮಕ ಮತ್ತು ನೈತಿಕ ವಿಚಾರ. ನೈತಿಕವಾಗಿ ಹೊಣೆ ಹೊತ್ತು ಅವರು ರಾಜೀನಾಮೆ ನೀಡಿದ್ದಾರೆ. ಕಾನೂನಾತ್ಮಕ ವಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಸಮ್ಮತಿ ಯಿಂದ ನಡೆದ ದೈಹಿಕ ಸಂಪರ್ಕ ಅಪರಾಧ ಅಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆ ಹೆಣ್ಣುಮಗಳ ವರ್ತನೆ ನೋಡಿದರೆ ಇಚ್ಛೆಪಟ್ಟು ಹೋಗಿದ್ದಾರೆ ಅನ್ನೋ ಭಾವನೆ ಬರುತ್ತದೆ. ಹಾಗಾಗಿ ಜಾರಕಿಹೊಳಿಗೆ ಶಿಕ್ಷೆ ಆಗಲಾರದು. ಕೋರ್ಟ್ನಲ್ಲಿ ಕೇಸ್ ಇರುವಾಗ ಎಲ್ಲವನ್ನು ಎದುರಿಸಲೇಬೇಕು.
ನ್ಯಾಯಾಲಯದಲ್ಲಿ ಪ್ರಕರಣ ಇದ್ದಾಗ ಯಾರನ್ನು ದೂರ ಸಾಧ್ಯವಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿಲ್ಲ ಎಂದರು.
ಶಾಸಕ ರಘುಪತಿ ಭಟ್ ಉಪಸ್ಥಿತರಿದ್ದರು.