

ನ್ಯಾಮತಿ: ಪಹಲ್ಗಾಮ್ಲ್ಲಿ ಭಾರತೀಯ ಮಹಿಳೆಯರ ಸಿಂಧೂರ ಅಳಿಸಿದ ಉಗ್ರರಿಗೆ ಹಾಗೂ ಅವರನ್ನು ಪೋಷಿಸಿದ ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ ಮೂಲಕ ನಮ್ಮ ಸೈನಿಕರು ತಕ್ಕ ಉತ್ತರ ನೀಡಿದ್ದಾರೆಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನ್ಯಾಮತಿಯ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಕಾಲೇಜು ವಿದ್ಯಾರ್ಥಿಗಳು,ಬಿಜೆಪಿ ಮುಖಂಡರು, ಕಾರ್ಯಕರ್ತರ ನೇತೃತ್ವದಲ್ಲಿ ಮಂಗಳವಾರ ಆಯೋಜಿಸಿದ್ದ ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ನಮ್ಮ ಸೈನ್ಯದ ದಾಳಿಗೆ ಬೆದರಿ ಪಾಕಿಸ್ತಾನವೇ ಅಂಗಲಾಚಿ ಯುದ್ಧ ವಿರಾಮಕ್ಕೆ ಭಾರತದ ಮುಂದೆ ಮಂಡಿಯೂರಿ ಬೇಡಿದಕ್ಕೆ ಕದನ ವಿರಾಮ ಘೊಷಿಸಿದ್ದಾರೆ ಎಂದರು.
ಪಾಕ್ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ತರಬೇತಿ ಕೇಂದ್ರ ಹಾಗೂ ಜೆಹಾದಿ ಬೋಧನೆಗೆ ಬಳಸುವ ನೆಟ್ವರ್ಕ್, ಐಎಸ್ಐ ಉಗ್ರರ ತಾಣ ಹಾಗೂ ಪಾಕಿಸ್ತಾನ ಗುಪ್ತಚರ ವ್ಯವಸ್ಥೆಗಳ ಮೇಲೆ ಭಾರತೀಯರು ದಾಳಿ ನಡೆಸಿದರು. ಈ ಮೂಲಕ ವಿಶ್ವಕ್ಕೆ ಭಾರತದ ಶಕ್ತಿ ಪರಿಚಯವಾಯಿತು ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡರು ಎಂದಿಗೂ ಪಾಕಿಸ್ತಾನ ಕೇಳುವ ಪ್ರಶ್ನೆ ಕೇಳುತ್ತಾರೆ. ದಿನೇಶ್ ಗುಂಡೂರಾವ್, ಪ್ರಿಯಾಂಕ ಖರ್ಗೆ, ಕೃಷ್ಣ ಭೈ ರೇಗೌಡ, ಸಂತೋಷ್ ಲಾಡ್, ಕೊತ್ತೂರು ಮಂಜುನಾಥ ಅವರ ವರ್ತನೆ ನಾಚಿಕೆಗೇಡು ಎಂದರು.
ಸುರಹೊನ್ನೆ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಿಂದ ನ್ಯಾಮತಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಹೊರಗೆ ಮೆರವಣಿಗೆ ನಡೆಯಿತು.
ಯಾತ್ರೆಯಲ್ಲಿ ಹೊನ್ನಾಳಿ- ನ್ಯಾಮತಿ ಮಂಡಲ ಅಧ್ಯಕ್ಷ ಅರಕೆರೆ ನಾಗರಾಜ್, ಹನುಮಂತಪ್ಪ ಚಟ್ನಹಳ್ಳಿ, ನ್ಯಾಮತಿ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ, ಸೋಮಶೇಖರ್, ಸದಾಶಿವಪ್ಪ, ಸಿದ್ದಲಿಂಗಪ್ಪ, ಈರಣ್ಣ ಗೌಡ್ರು, ಕರಿಬಸಪ್ಪ, ಶಿವಾನಂದ್, ಮಾರುತಿ ನಾಯ್ಕ, ವಿವಿಧ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.