

ವಿಜಯಪುರ: ಬರದ ಜಿಲ್ಲೆ, ಹಿಂದುಳಿದ ಪ್ರದೇಶ, ಬಿಸಿಲು ನಾಡು ಎಂಬ ಹಣೆ ಪಟ್ಟಿ ಕಳಚುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಕೋಟಿ ವೃಕ್ಷ ಅಭಿಯಾನಕ್ಕೆ ಪುನಃಶ್ಚೇತನ ನೀಡಲು ಮುಂದಾಗಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ, ಇದೀಗ ಮತ್ತೆ ಹಮ್ಮಿಕೊಂಡಿರುವ ವೃಕ್ಷೋತ್ಥಾನ ಹೆರಿಟೇಜ್ ರನ್ -2023ರ ಲಾಂಛನ ಅನಾವರಣಗೊಳಿಸಿದರು.
ಇಲ್ಲಿನ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ಲಾಂಛನ ಬಿಡುಗಡೆಗೊಳಿಸಿದ ಸಚಿವರು, ಡಿ. 24 ರಂದು ಐತಿಹಾಸಿಕ ವಿಜಯಪುರದಲ್ಲಿ ಅರಣ್ಯೀಕರಣ ಅಭಿವೃದ್ಧಿಪಡಿಸುವುದರ ಜೊತೆಗೆ ಸ್ಮಾರಕಗಳ ಕುರಿತು ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಕೋಟಿ ವೃಕ್ಷ ಅಭಿಯಾನದ ಅಂಗವಾಗಿ ವೃಕ್ಷೋತ್ಥಾನ್ ಹೆರಿಟೇಜ್ ರನ್-2023 ಆಯೋಜಿಸಲಾಗಿದೆ ಎಂದರು.
ಪರಿಸರ ರಕ್ಷಣೆ ಜೊತೆಗೆ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಮಹತ್ವ ಕುರಿತು ಪರಿಣಾಮಕಾರಿಯಾಗಿ ಪ್ರಚಾರಗೊಳಿಸುವುದು ಕಾರ್ಯಕ್ರಮ ಉದ್ದೇಶವಾಗಿದೆ. ಐತಿಹಾಸಿಕ ಸ್ಮಾರಕಗಳ ಮಹತ್ವದ ಕುರಿತು ಜನರಲ್ಲಿ ಆಸಕ್ತಿ ಮೂಡಿಸಿ, ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಜನರಲ್ಲಿ ಮರ ಬೆಳೆಸುವ ಪರಿಸರ ಉಳಿಸುವ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಈ ಹಿಂದೆ ಕೋಟಿ ವೃಕ್ಷ ಅಭಿಯಾನ ಆರಂಭಿಸಿ ಪ್ರತಿ ವರ್ಷ 25 ಲಕ್ಷ ಸಸಿಳನ್ನು ನೆಟ್ಟು 5 ವರ್ಷಗಳಲ್ಲಿ ಒಂದು ಕೋಟಿ ಸಸಿಗಳನ್ನು ಮರಗಳನ್ನಾಗಿಸಬೇಕೆಂಬ ಗುರಿ ಹಮ್ಮಿಕೊಳ್ಳಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಕೋಟಿ ವೃಕ್ಷ ಅಭಿಯಾನದಡಿ ಸಸಿಗಳ ಬೆಳೆಸುವಿಕೆ ಪ್ರಮಾಣ ಕುಂಠಿತಗೊಂಡು, 2017ರ ಮುಂಚೆ ಇದ್ದ ಸ್ಥಿತಿಯೇ ಮರುಕಳಿಸಿದೆ. ಅರಣ್ಯ ಬಲಪಡಿಸುವ ನಿಟ್ಟಿನಲ್ಲಿ ಕೋಟಿ ವೃಕ್ಷ ಅಭಿಯಾನಕ್ಕೆ ಪುನಶ್ಚೇತನ ನೀಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಹಲವು ವರ್ಷಗಳ ನಂತರ ಬರಗಾಲ ಎದುರಿಸುತ್ತಿದ್ದು, ಈ ಸಂದರ್ಭದಲ್ಲಿ ಕೋಟಿ ವೃಕ್ಷ ಅಭಿಯಾನವನ್ನು ಹೆಚ್ಚು ಬಲಗೊಳಿಸುವ ಅವಶ್ಯಕತೆ ಇದೆ. ಪರಿಸರ ರಕ್ಷಣೆ ಜೊತೆಗೆ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಮಹತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೋಟಿ ವೃಕ್ಷ ಅಭಿಯಾನದ ಜೊತೆಗೆ ಸಿಆರ್‌ಡಿಎಸ್ ಫೌಂಡೇಶನ್ ಕೈ ಜೋಡಿಸಿದೆ. ಕೋಟಿ ವೃಕ್ಷ ಅಭಿಯಾನದಿಂದ ಸರ್ಕಾರಿ ಜಮೀನಿನ ಅತಿಕ್ರಮಣ ತಡೆಯಲು ಸಹ ಸಹಕಾರಿಯಾಗಲಿದೆ ಎಂದರು.
ಡಿ.24 ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ವೃಕ್ಷೋತ್ಥಾನ್ ಹೆರಿಟೇಜ್ ರನ್-2023 ಹಮ್ಮಿಕೊಳ್ಳಲಾಗಿದೆ. ಅದು ನಡೆಯುವ ಓಟದಲ್ಲಿ 3,5, 10 ಮತ್ತು 21 ಕಿಮೀಗಳ ಓಟ ನಡೆಯಲಿದೆ. ಅಂಬೇಡ್ಕರ್ ಕ್ರೀಡಾಂಗಣದಿಂದ ಆರಂಭಗೊಂಡು ಐತಿಹಾಸಿಕ ಸ್ಮಾರಕಗಳಾದ ಗೋಳಗುಮ್ಮಟ, ಗಗನಮಹಲ್, ನರಸಿಂಹ ದೇವಸ್ಥಾನ, ಬಾರಾಕಮಾನ ಹಾಗೂ ಮುಖ್ಯ ವೃತ್ತಗಳು, ಸೈನಿಕ ಶಾಲೆ, ಬಿಎಲ್ಡಿಇ ಡೀಮ್ಡ್ ವಿವಿ ಆವರಣ, ಜ್ಞಾನಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮಿಗಳ ಗದ್ದುಗೆ, ಶತಮಾನಗಳ ಇತಿಹಾಸವಿರುವ ಶ್ರೀ ಸಿದ್ಧೇಶ್ವರ ದೇವಾಲಯದ ಮುಂದೆ ಓಟಗಳು ನಡೆಯಲಿವೆ ಎಂದು ಸಚಿವ ಪಾಟೀಲ ವಿವರಿಸಿದರು.
ಶತಮಾನದ ಸಂತ ಜ್ಞಾನಯೋಗಿ ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರಿಗೆ ಸಮರ್ಪಿತವಾದ ಈ ಓಟದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಹೊರ ಜಿಲ್ಲೆ, ರಾಜ್ಯಗಳಿಂದ ಅಂದಾಜು 2 ರಿಂದ 3 ಸಾವಿರ ಓಟಗಾರರು ಭಾಗವಹಿಸುವ ನಿರೀಕ್ಷೆ ಇದ್ದು, ಒಟ್ಟು 10 ಸಾವಿರ ಜನರು ಈ ಓಟದಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಈ ಓಟವನ್ನು ನಿರಂತರವಾಗಿ ಏರ್ಪಡಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವನೆ, ಜಿಪಂ ಸಿಇಒ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ವಿಜಯಪುರ ಉಪ ವಿಭಾಗಾಧಿಕಾರಿ ಬಸಣೆಪ್ಪ ಕಲಶೆಟ್ಟಿ ಮತ್ತಿತರರಿದ್ದರು.