

ವಿಜಯಪುರ: ಜಾತಿ ಗಣತಿ ವರದಿ ಜಾರಿಗೆ ಯಾರ ವಿರೋಧವೂ ಇಲ್ಲ. ಆದರೆ, ಎಲ್ಲ ಜಾತಿಗಳ ಜನರಿಗೆ ನ್ಯಾಯ ಸಿಗಬೇಕು, ಯಾರಿಗೂ ಅನ್ಯಾಯವಾಗಬಾರದೆಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದರು.
ಲಿಂಗಾಯತರಲ್ಲಿ ಅನೇಕ ಉಪಪಂಗಡಗಳಿವೆ. ಹಿಂದು ಸಾದರ, ಹಿಂದು ಬಣಜಿಗ ಹಾಗೂ ಇತರೆ ಕೆಲವು ಜಾತಿಯವರು 2 ಎಂದು ಬರೆಯಿಸಿದ್ದಾರೆ. ಹೀಗಾಗಿ ಪ್ರತ್ಯೇಕವಾಗಿ ಪರಿಗಣಿಸಿದರೆ ಲಿಂಗಾಯತರ ಸಂಖ್ಯೆ ಕಡಿಮೆಯಾಗಲಿದೆ. ಸದ್ಯ ನಾನು ವರದಿ ನೋಡಿಲ್ಲ. ನೋಡಿದ ಬಳಿಕ ಮಾತನಾಡುವೆ ಎಂದು ಬುಧವಾರ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.
ಇನ್ನು ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಡೆಸಿರುವ ವಾಗ್ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಎಂ.ಬಿ. ಪಾಟೀಲ, ನಮ್ಮ ಗ್ಯಾರಂಟಿ ಯೋಜನೆಗಳನ್ನು ಮೋದಿ ಹಾಗೂ ಬಿಜೆಪಿಯೇ ನಕಲು ಮಾಡಿದ್ದಾರೆ. ಅನ್ಯ ರಾಜ್ಯಗಳ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆ ಘೋಷಿಸಿದ್ದಾರೆ. ಬಿಜೆಪಿ ಹಾಗೂ ಮೋದಿ ಘೋಷಿಸಿದರೆ ನಡೆಯುತ್ತದೆ ಕಾಂಗ್ರೆಸ್‌ನ ಯೋಜನೆ ಏಕೆ ನಡೆಯಬಾರದು ಎಂದ ಎಂ.ಬಿ. ಪಾಟೀಲರು, ಬಡವರಿಗೆ, ಮಹಿಳೆಯರಿಗೆ ಸಶಕ್ತರನ್ನಾಗಿ ಮಾಡಲು ನಾವು ಗ್ಯಾರಂಟಿ ಕೊಟ್ಟಿದ್ದೇವೆ. ಅವು ಮುಂದುವರಿಯಲಿವೆ-ಅಭಿವೃದ್ಧಿ ಕೂಡ ಆಗಲಿದೆ ಎಂದರು.
ಕೆಲವು ತಿಂಗಳುಗಳಿಂದ ಗೃಹ ಲಕ್ಷ್ಮಿ ಯೋಜನೆ ಹಣ ಪಾವತಿ ಇಲ್ಲ ಎಂಬ ವಿಚಾರ ಕುರಿತು ಚರ್ಚೆ ಮಾಡುವುದಾಗಿ ತಿಳಿಸಿದರಲ್ಲದೇ, ಗೃಹ ಲಕ್ಷ್ಮಿ ಯೋಜನೆಯನ್ನು ಉಳ್ಳವರು ತೆಗೆದುಕೊಳ್ಳಬಾರದು. ಬಡವರಿಗೆ ಹೋಗಬೇಕು. ಶ್ರೀಮಂತರು ಸ್ವಯಂ ಪ್ರೇರಿತವಾಗಿ ಯೋಜನೆ ಬಿಟ್ಟುಕೊಡಬೇಕು. ಇಲ್ಲವೇ ಸರ್ಕಾರವೇ ಅಂಥವರನ್ನು ತೆಗೆದು ಹಾಕಬೇಕೆಂದರು.
ರಾಜ್ಯದಲ್ಲಿ ಗುತ್ತಿಗೆದಾರರ ಬಾಕಿ ಹಣ ವಿಚಾರಕ್ಕೆ ಸಂಬಂಧಿಸಿದಂತೆ ಖಾರವಾಗಿ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲರು, ಗುತ್ತಿಗೆದಾರರ ಸಮಸ್ಯೆಗೆ ಯಾರು ಕಾರಣ? ಈ ಹಿಂದಿನ ಬಿಜೆಪಿ ಸರ್ಕಾರ ಅನಧಿಕೃತವಾಗಿ ಗುತ್ತಿಗೆ ನೀಡಿದೆ. ಬಜೆಟ್ ಇಲ್ಲದೆ ಟೆಂಡರ್ ಕರೆದು ಕಮೀಷನ್ ಹೊಡೆದು ಹೋಗಿದ್ದಾರೆ. ಅವರ ಪಾಪದ ಕೊಡ ನಾವು ಹೊರುತ್ತಿದ್ದೇವೆ ಎಂದರು.
ಹಿಂದಿನ ಬಿಜೆಪಿ ಸರ್ಕಾರದ ಅವಾಂತರಗಳು ಒಂದೆರಡಲ್ಲ. ನೂರು ರೂಪಾಯಿ ಅನುದಾನ ಇದ್ದರೆ ಸಾವಿರ ರೂಪಾಯಿದಷ್ಟು ಟೆಂಡರ್ ಕೊಟ್ಟಿದ್ದಾರೆ. ಬಜೆಟ್‌ಗಿಂತ ಹೆಚ್ಚಿನ ಕಾಮಗಾರಿ ಕೊಟ್ಟಿದ್ದಾರೆ. ಸಚಿವ ಸಂಪುಟದ ಅನುಮೋದನೆ ಪಡೆಯದೇ ಟೆಂಡರ್ ನೀಡಿದ್ದು ಯಾರ ತಪ್ಪು? ಅಷ್ಟೇ ಏಕೆ ವೈದ್ಯಕೀಯ ಇಲಾಖೆಯಲ್ಲಿಯೂ ಇಂಥದ್ದೇ ಹಗರಣ ಆಗಿದೆ. ಅದೆಲ್ಲವೂ ತನಿಖೆಯಾಗುತ್ತಿದೆ ಎಂದರು.