ರೈತರ ಹೋರಾಟದ ಹಿಂದೆ ರಾಜಕೀಯ, ರಾಜ್ಯ ಸರ್ಕಾರದ ವಿರುದ್ಧ ಷಡ್ಯಂತ್ರ ಎಂದ ಸಚಿವ ಎಂ.ಬಿ. ಪಾಟೀಲ

m b patil
ವಿಜಯಪುರದ ಗೃಹ ಕಚೇರಿಯಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ. ಎಂ.ಬಿ. ಪಾಟೀಲ ಸುದ್ದಿಗೋಷ್ಠಿ ನಡೆಸಿದರು.
Published on

ವಿಜಯಪುರ: ಕಬ್ಬು ಬೆಳೆಗಾರರ ಹೋರಾಟಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ, ರೈತರು ಪಕ್ಷಾತೀತವಾಗಿ ಹೋರಾಟ ಮಾಡಬೇಕಿತ್ತು, ರೈತರ ಹೋರಾಟ ಸ್ಥಳದಲ್ಲಿ ವಿಜಯೇಂದ್ರ ಹೋಗಿ ಮಲಗಿದ್ದೇಕೆ? ಎಂದಿರುವ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರು, ರಾಜ್ಯದಲ್ಲಿ ತಮ್ಮ ಮತ್ತು ಸಿದ್ದರಾಮಯ್ಯ ವಿರುದ್ಧ ಅಷ್ಟೇ ಏಕೆ ರಾಜ್ಯ ಸರ್ಕಾರದ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಈಗಾಗಲೇ ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆಗಳ ಮಾಲೀಕರ ಮನವೊಲಿಸಿ, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದ ನಿರ್ಣಯ ಮಾಡಿ ದರ ಘೋಷಿಸಿದೆ. ರೈತರೂ ಒಪ್ಪಿದ್ದಾರೆ. ಆದರೆ, ಕಬ್ಬು ಬೆಳೆಗಾರರ ಈ ಹೋರಾಟದಲ್ಲಿ ಬಿಜೆಪಿಯವರು ರಾಜಕೀಯ ಮಾಡಿದರೆಂದು ಶನಿವಾರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.

ಕಬ್ಬು ದರ ಘೋಷಣೆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕಿಂತ ಕೇಂದ್ರ ಸರ್ಕಾರದ ಪಾಲು ದೊಡ್ಡದು. ಎಫ್‌ಆರ್‌ಪಿ ನಿರ್ಧರಿಸೋದು, ಇಥೆನಾಲ್ ಕೋಟಾ ಫಿಕ್ಸ್ ಮಾಡೋದು, ಎಂಎಸ್‌ಪಿ ನಿಗದಿಪಡಿಸುವುದು, ಸಕ್ಕರೆ ಆಮದು ಮತ್ತು ರಫ್ತು ಮಾಡುವುದು...ಹೀಗೆ ಅನೇಕ ಹಂತದಲ್ಲಿ ಕೇಂದ್ರ ಸರ್ಕಾರದ ಪಾತ್ರವೇ ದೊಡ್ಡದಿದೆ. ಇದೆಲ್ಲ ಬಿಜೆಪಿಗರಿಗೆ ಗೊತ್ತಿರಲಿಲ್ಲವೇ? ನಮ್ಮ ಸಹೋದರ ವಿಜಯೇಂದ್ರ ಅವರು ಮಲಗಿಕೊಂಡು ನಾಟಕ ಮಾಡುವ ಬದಲು ಪ್ರಧಾನಿ ಭೇಟಿಗೆ ಅವಕಾಶ ಕೊಡಿಸಲಿ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ಅವರು ಇಥೆನಾಲ್ ಖರೀದಿ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆಂಬ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಎಂ.ಬಿ. ಪಾಟೀಲರು, ಲೋಕಸಭೆಯಲ್ಲಿ ಇದೇ ಆಗಸ್ಟ್-ಅಕ್ಟೋಬರ್ ತಿಂಗಳಲ್ಲಿಯೇ ಪ್ರಲ್ಹಾದ್ ಜೋಶಿ ಅವರು ಕೊಟ್ಟ ಉತ್ತರದ ಪ್ರತಿ ತಮ್ಮ ಬಳಿ ಇದೆ. ಆ ಮಾಹಿತಿ ಆಧರಿಸಿಯೇ ಸಿದ್ದರಾಮಯ್ಯ ಅವರು ಹೇಳಿದ್ದು. ಬೇಕಾದರೆ ಆ ಪ್ರತಿ ಕೊಡುತ್ತೇವೆ. ಹಾಗೊಂದು ವೇಳೆ ಜೋಷಿ ಅವರೇ ತಪ್ಪು ಮಾಹಿತಿ ನೀಡಿದ್ದರೆ ತಮಗದು ಗೊತ್ತಿಲ್ಲ ಎಂದರು.

ಕೇಂದ್ರ ಸರ್ಕಾರದ ಜವಾಬ್ದಾರಿ

ಕಬ್ಬು ಮತ್ತು ಸಕ್ಕರೆ ದರ ನಿಗದಿಯಲ್ಲಿ ಕೇಂದ್ರ ಸರ್ಕಾರದ ಪಾತ್ರವೇ ದೊಡ್ಡದು. ಟನ್ ಕಬ್ಬಿಗೆ 3550 ರೂಪಾಯಿ ಎಫ್‌ಆರ್‌ಪಿ ನಿಗದಿಪಡಿಸಿದ್ದು ಕೇಂದ್ರ ಸರ್ಕಾರ, ಕೇಂದ್ರ ಗ್ರಹ ಇಲಾಖೆ ಮಂತ್ರಿ ಪ್ರಲ್ಹಾದ್ ಜೋಷಿ ಅವರೇ ಅಲ್ಲವೇ? ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಪ್ರಧಾನಿ ಮತ್ತು ಸಚಿವ ಪ್ರಲ್ಹಾದ್ ಜೋಷಿಗೆ ಪತ್ರ ಬರೆದಿದ್ದು, ಸಕ್ಕರೆಯ ಎಂಎಸ್‌ಪಿ 31 ಇರುವುದನ್ನು 41ಕ್ಕೆ ಏರಿಕೆ ಮಾಡಿ ಎಂದಿದ್ದಾರೆ. ಸಕ್ಕರೆ ದರ ಏರಿಕೆಯಾದರೆ ರೈತರಿಗೆ ಅನುಕೂಲವಾಗಲಿದೆ.

ಕರ್ನಾಟಕದಲ್ಲಿ 2.70 ಕೋಟಿ ಲೀಟರ್ ಇಥೆನಾಲ್ ಉತ್ಪಾದನೆಯಾದರೆ ಖರೀದಿಯಾಗೋದು ಕೇವಲ 40 ಕೋಟಿ ಲೀಟರ್ ಮಾತ್ರ. ಶೇ.70ರಷ್ಟು ಮಾತ್ರ ಖರೀದಿಯಾಗುತ್ತಿದೆ. ಆದರೆ, ಗುಜರಾತ್‌ನಲ್ಲಿ ಗುಜರಾತ್‌ನಲ್ಲಿ ಉತ್ಪಾದನೆ 40 ಕೋಟಿ ಲೀಟರ್ ಇದ್ದರೆ 31 ಕೋಟಿ ಲೀಟರ್ ಖರೀದಿಯಾಗುತ್ತಿದೆ. ಅಂದರೆ 75 ರಷ್ಟು ಖರೀದಿಯಾಗುತ್ತದೆ. ಕೇಂದ್ರ ಸರ್ಕಾರದ ಜವಾಬ್ದಾರಿ ಬಿಟ್ಟು ರಾಜ್ಯ ಸರ್ಕಾರದ ಮೇಲೆ ರೈತರನ್ನು ಎತ್ತಿ ಕಟ್ಟು ಪ್ರಯತ್ನ ಮಾಡಿದರೆಂದು ಎಂ.ಬಿ. ಪಾಟೀಲ ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net