ಪಿಪಿಪಿಗಾಗಿ ಲಾಬಿ ಮಾಡುತ್ತಿಲ್ಲ, ಸರ್ಕಾರಿ ವ್ಯವಸ್ಥೆ ಪರ ಇದ್ದೇನೆ, ಒಟ್ಟಿನಲ್ಲಿ ವೈದ್ಯಕೀಯ ಕಾಲೇಜ್ ಸ್ಥಾಪನೆ ನಿಶ್ಚಿತ ಎಂದ ಸಚಿವ ಎಂ.ಬಿ. ಪಾಟೀಲ

m b patil
ವಿಜಯಪುರದ ಗೃಹ ಕಚೇರಿಯಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ. ಎಂ.ಬಿ. ಪಾಟೀಲ ಸುದ್ದಿಗೋಷ್ಠಿ ನಡೆಸಿದರು.
Published on

ವಿಜಯಪುರ: ಪಿಪಿಪಿ ಮಾದರಿಯೋ ಅಥವಾ ಸರ್ಕಾರದಿಂದಲೋ ಎಂಬುದರ ಬಗ್ಗೆ ಸ್ಪಷ್ಟವಾಗಿ ಹೇಳಲಾದರೆ, ಒಟ್ಟಿನಲ್ಲಿ ವೈದ್ಯಕೀಯ ಕಾಲೇಜ್ ಸ್ಥಾಪನೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಮಾರ್ಮಿಕವಾಗಿ ನುಡಿದರು.

ಈಗಾಗಲೇ ಸರ್ಕಾರಿ ವೈದ್ಯಕೀಯ ಕಾಲೇಜ್‌ಗೆ ಸಂಬಂಧಿಸಿದಂತೆ ಸಿಎಂ ಮತ್ತು ಡಿಸಿಎಂ ಗಮನ ಸೆಳೆದಿದ್ದೇನೆ. ವೈಯಕ್ತಿಕವಾಗಿ ನಾನು ಸಹ ಸರ್ಕಾರಿ ವೈದ್ಯಕೀಯ ಕಾಲೇಜ್ ಪರವಾಗಿಯೇ ಇದ್ದೇನೆ. ಪಿಪಿಪಿಗಾಗಿ ನಾನೇನು ಲಾಬಿ ಮಾಡುತ್ತಿಲ್ಲ. ನನಗೆ ಅಂದರೆ ಬಿಎಲ್‌ಡಿಇಗೆ ಬೇಕಾದರೆ ಹತ್ತು ಕಾಲೇಜ್ ತರುತ್ತೇನೆಂದು ಈಗಾಗಲೇ ಹೇಳಿದ್ದೇನೆ. ಆದರೆ, ಪಿಪಿಪಿ ಕುರಿತು ತಪ್ಪು ಕಲ್ಪನೆ ಬೇಡ ಎಂದು ಸೋಮವಾರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.

ಈವರೆಗೆ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜ್ ಸ್ಥಾಪನೆ ಎಂದೇ ಘೋಷಣೆಯಾಗಿದೆ. ಬಜೆಟ್‌ನಲ್ಲೂ ಪಿಪಿಪಿ ಮಾದರಿ ಎಂದೇ ಘೋಷಿಸಲಾಗಿದೆ. ಪಿಪಿಪಿ ಮಾದರಿಯಾದರೆ ತಪ್ಪೇನು? ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಸರ್ಕಾರಿ ಮತ್ತು ಪಿಪಿಪಿ ಮಾದರಿಯಲ್ಲೇನೂ ವ್ಯತ್ಯಾಸವಿಲ್ಲ. ನೂರಕ್ಕೆ ನೂರರಷ್ಟು ಸರ್ಕಾರಿ ಕಾಲೇಜ್ ಮಾದರಿಯಲ್ಲೇ ಸೀಟುಗಳ ಹಂಚಿಕೆಯಾಗಲಿದೆ. ಕೆಲವರಲ್ಲಿ ತಪ್ಪು ಕಲ್ಪನೆ ಸೃಷ್ಠಿಯಾಗಿದೆ ಮತ್ತು ತಪ್ಪು ಕಲ್ಪನೆ ಸೃಷ್ಠಿ ಮಾಡಿದ್ದಾರೆಂದರು.

ಹೋರಾಟದ ಹಿಂದೆ ರಾಜಕೀಯ

ಪಿಪಿಪಿ ಮಾದರಿ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲದೇ ಕೆಲವರು ಹೋರಾಟಕ್ಕೆ ಕುಳಿತಿದ್ದಾರೆ. ಹೋರಾಟದ ಹಿಂದೆ ರಾಜಕೀಯ ಇದೆ. ಪಂಪ್ ಹೊಡೆದು ಕೂರಿಸಿದ್ದಾರೆ. ಅದರಲ್ಲಿ ಕೆಲವರು ಮುಗ್ದರೂ ಇದ್ದಾರೆ. ನಿಮ್ಮ ಸಚಿವರು...ಅಲ್ಲಲ್ಲ....ನಮ್ಮ ಸಚಿವರು ಶಿವಾನಂದ ಪಾಟೀಲ ಅವರು ಪರೋಕ್ಷವಾಗಿ ನನ್ನ ಹೆಸರು ಹೇಳಿದಾಗ ಖಡಕ್ ಆಗಿಯೇ ಹೇಳಿದ್ದೇನೆ. ಪಿಪಿಪಿ ಮಾದರಿ ಹಿಂದೆ ವೈಯಕ್ತಿಕ ಹಿತಾಸಕ್ತಿ ಇಲ್ಲ. ಸರ್ಕಾರದಿಂದಲೇ ಆಗಬೇಕೆಂಬ ಭಾವನೆ ನನ್ನದು. ಒಟ್ಟಾರೆ ಕಾಲೇಜ್ ಆಗಲಿ ಎಂದರಲ್ಲದೇ, 100 ಕೋಟಿ ರೂಪಾಯಿಯಲ್ಲಿ ಕಾಲೇಜ್ ಆಗಲ್ಲ; ಅಷ್ಟು ಸರಳ ಅಲ್ಲ. ಏಮ್ಸ್ ತರುವುದು ಸಹ ಆಗಲ್ಲ. ತಿಳಿವಳಿಕೆ ಇಲ್ಲದಂಗೆ ಮಾತನಾಡುತ್ತಾರೆ. ಮೋದಿ ಸರ್ಕಾರ ಏಮ್ಸ್ ಮಂಜೂರು ಮಾಡುವುದನ್ನು ಬಂದ್ ಮಾಡಿದೆ ಎಂದರು.

ತುಮಕೂರು ಸೇರಿ ನಾಲ್ಕು ಕಡೆ ಪಿಪಿಪಿ ಮಾದರಿಯಲ್ಲೇ ವೈದ್ಯಕೀಯ ಕಾಲೇಜ್‌ಗಳಿವೆ. ಸರ್ಕಾರಿ ಕಾಲೇಜುಗಳು ಎಷ್ಟೊಂದು ಕಷ್ಟದಲ್ಲಿವೆ ನೀವೂ ನೋಡಿದ್ದೀರಿ ಎಂದ ಸಚಿವರು ಆ ಕುರಿತು ನಾನು ಮಾತನಾಡಬಾರದೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net