

ವಿಜಯಪುರ: ಅತಿವೃಷ್ಠಿ ಹಾಗೂ ಪ್ರವಾಹ ಹಿನ್ನೆಲೆ ಭೀಮಾ ನದಿ ಪಾತ್ರದಲ್ಲಿ ಉಂಟಾದ ಹಾನಿಗೆ ತುರ್ತಾಗಿ ರೂ. 5 ಸಾವಿರ ಪರಿಹಾರ ನೀಡಲಾಗುತ್ತಿದ್ದು, ಸೆ. 30 ರಂದು ವೈಮಾನಿಕ ಸಮೀಕ್ಷೆ ನಡೆಸಲಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಹೆಚ್ಚುವರಿ ಪರಿಹಾರ ಕುರಿತು ಚರ್ಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ತಿಳಿಸಿದರು.
ಈಗಾಗಲೇ ಸಿಂದಗಿ ಹಾಗೂ ಇಂಡಿ ಭಾಗದಲ್ಲಿ ಸ್ಥಳೀಯ ಶಾಸಕರೊಂದಿಗೆ ಪರಿಶೀಲನೆ ನಡೆಸಲಾಗಿದೆ. ಸಾಕಷ್ಟು ಬೆಳೆ ಹಾನಿಯಾಗಿದ್ದು ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಜಾನುವಾರುವಿಗೆ ಮೇವು ಸಹ ಒದಗಿಸಲಾಗುತ್ತಿದೆ. ಕೆಲವು ಗ್ರಾಮಗಳನ್ನು ಸ್ಥಳಾಂತರಿಸಬೇಕೆಂಬ ಬೇಡಿಕೆ ಇದ್ದು, ಆ ಕುರಿತು ಮುಖ್ಯಮಂತ್ರಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ರಾಜ್ಯದಲ್ಲೇ ಅತೀ ಹೆಚ್ಚು ಮಳೆ ಬಿದ್ದ ಜಿಲ್ಲೆಗಳಲ್ಲಿ ವಿಜಯಪುರ ಪ್ರಥಮ ಸ್ಥಾನದಲ್ಲಿದ್ದು, ಬಾಗಲಕೋಟೆ ನಂತರದ ಸ್ಥಾನದಲ್ಲಿದೆ. ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಶೇ.60ರಷ್ಟು ಹಾಗೂ ಸೆಪ್ಟೆಂಬರ್‌ನಲ್ಲಿ ಶೇ.73ರಷ್ಟು ಹೆಚ್ಚುವರಿ ಮಳೆಯಾಗಿದೆ. ಪರಿಣಾಮ 6,815.15 ಹೆಕ್ಟೇರ್ ಕೃಷಿ ಮತ್ತು 566.71 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿ ಒಟ್ಟು 7,381.86 ಹೆಕ್ಟೇರ್ ಬೆಳೆ ಹಾನಿಯಾದ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ ಮಳೆಯಿಂದ ಅಂದಾಜು 1,31,490 ಹೆಕ್ಟೇರ್ ಕೃಷಿ ಬೆಳೆ ಹಾಗೂ 6,749 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ ಸೇರಿ ಒಟ್ಟು 1,38,239 ಹೆಕ್ಟೇರ್ ಬೆಳೆ ಹಾನಿಯ ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದು, ಜಂಟಿ ಸಮೀಕ್ಷೆ ಪ್ರಗತಿಯಲ್ಲಿದೆ ಎಂದರು.
ಇನ್ನು ರಸ್ಥೆಗಳು ಸಂಪೂರ್ಣ ಹಾಳಾಗಿದ್ದು, ಶೀಘ್ರದಲ್ಲೇ ದುರಸ್ಥಿ ಕೈಗೊಳ್ಳಲಾಗುವುದು. ಮಳೆಯಿಂದಾಗಿ ಗುಣಮಟ್ಟದ ರಸ್ತೆಗಳು ಸಹ ಹಾಳಾಗಿವೆ. ಅಲ್ಲದೇ, ಕಬ್ಬಿನ ವಾಹನಗಳು ಯಥೇಚ್ಛವಾಗಿ ಸಂಚರಿಸುವುದರಿಂದಲೂ ರಸ್ತೆ ಗುಣಮಟ್ಟ ಕಳೆದುಕೊಳ್ಳುತ್ತಿವೆ. ಕೆಲವೆಡೆ ಕಳಪೆ ಕಾಮಗಾರಿಯಾದ ಉದಾಹರಣೆಗಳೂ ಇವೆ. ಶೀಘ್ರದಲ್ಲೇ ರಸ್ತೆಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದೆಂದರು.
ಇಂಡಿ ಮತ್ತು ಆಲಮೇಲ ಭಾಗದಲ್ಲಿ 17 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 185 ಕುಟುಂಬಗಳನ್ನೊಳಗೊಂಡಂತೆ ಒಟ್ಟು 860 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ವಸತಿ, ಉಪಹಾರ ಹಾಗೂ ಊಟದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ಜಿಲ್ಲಾದ್ಯಂತ ಈ ವರ್ಷ 1,041 ಮನೆಗಳಿಗೆ ಹಾನಿಯಾಗಿವೆ. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಮಾರ್ಗಸೂಚಿ ಹಾಗೂ ಸರ್ಕಾರದ ಆದೇಶಗಳನ್ವಯ ಈಗಾಗಲೇ 675 ಮನೆಗಳಿಗೆ ಪರಿಹಾರ ವಿತರಣೆ ಮಾಡಲಾಗಿದೆ. ಇದೇ ವೇಳೆ, ಮನೆಗಳನ್ನು ಸಂಪೂರ್ಣ, ಭಾಗಶಃ ಹಾನಿ ಎಂದು ಪರಿಹಾರದಲ್ಲಿ ವ್ಯತ್ಯಾಸ ಮಾಡುವುದು ಬೇಡ. ಭಾಗಶಃ ಎಂದರೆ ಅದು ಸಂಪೂರ್ಣ ಹಾನಿಯಾದಂತೆಯೇ. ಹೀಗಾಗಿ ಅದನ್ನು ಸಂಪೂರ್ಣ ಎಂದೇ ಪರಿಗಣಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಕೃಷ್ಣಾ ನದಿ ಪಾತ್ರದಲ್ಲಿರುವಂತೆ ಭೀಮಾ ನದಿಗೆ ನೀರು ನಿಯಂತ್ರಣ ಮತ್ತು ನಿರ್ವಹಣೆ ವ್ಯವಸ್ಥೆ ಇಲ್ಲ. ಮಾಹಾರಾಷ್ಟ್ರದ ಅವೈಜ್ಞಾನಿಕ ನೀತಿಯಿಂದಾಗಿ ಜಿಲ್ಲೆಯಲ್ಲಿ ಪ್ರವಾಹ ಉಂಟಾಗುತ್ತಿದೆ. ಸ್ವಾಭಾವಿಕವಾಗಿ ಉಜನಿ ಜಲಾಶಯದಿಂದ ನೀರು ಹರಿಬಿಡಲಾಗುತ್ತಿತ್ತು. ಈ ಬಾರಿ ಸೀನಾ ನದಿಯಿಂದ 3 ಲಕ್ಷ ಕ್ಯೂಸೆಕ್‌ನಷ್ಟು ನೀರು ಬಿಟ್ಟಿರುವುದೇ ಪ್ರವಾಹ ಪರಿಸ್ಥಿತಿಗೆ ಕಾರಣವಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರ ಸಮನ್ವಯತೆಯಿಂದ ನೀರು ನಿರ್ವಹಣೆ ವ್ಯವಸ್ಥೆ ಕೈಗೊಳ್ಳಬೇಕಿದ್ದು ಆ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದೆಂದರು.
ಶಾಸಕರಾದ ವಿಠಲ ಕಟಕದೊಂಡ, ಅಶೋಕ ಮನಗೂಳಿ, ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಜಿಲ್ಲಾಧಿಕಾರಿ ಡಾ.ಆನಂದ ಕೆ, ಎಸ್‌ಪಿ ಲಕ್ಷ್ಮಣ ನಿಂಬರಗಿ, ಜಿಪಂ ಸಿಇಒ ರಿಷಿ ಆನಂದ ಮತ್ತಿತರರಿದ್ದರು.