

ಬೆಂಗಳೂರು: 'ನಾನು ಬಿ.ಎಲ್. ಸಂತೋಷ್ ಬಗ್ಗೆ ಮಾತನಾಡಿದ ತಕ್ಷಣ ಅದು ಇಡೀ ಬ್ರಾಹ್ಮಣ ಸಮುದಾಯವನ್ನು ಬೈದಂತಲ್ಲ. ನನ್ನ ಮತ್ತು ಬ್ರಾಹ್ಮಣರ ನಡುವಿನ ಸಂಬಂಧ ಎಷ್ಟೊಂದು ಮಧುರವಾಗಿದೆ ಎನ್ನುವುದನ್ನು ಒಮ್ಮೆ ವಿಜಯಪುರಕ್ಕೆ ಬಂದು ನೋಡಲಿ. ಪ್ರತಾಪ್ ಸಿಂಹ ಅವರು ದಿನವೂ ನನ್ನ ವಿರುದ್ಧ ವೈಯಕ್ತಿಕವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಅವರ ಮನಃಸ್ಥಿತಿ ತುಂಬಾ ಚಿಂತಾಜನಕವಾಗಿರುವಂತಿದೆ' ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಸದಾಶಿವ ನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ, 'ಹಿಂದೆ ಬಿಜೆಪಿಯ ಅನಂತ ಕುಮಾರ್ ಹೆಗಡೆ ಅವರು ಕೇಂದ್ರದಲ್ಲಿ ಮಂತ್ರಿಗಳಾಗಿದ್ದರು. ಆಗ ನಾನು ರಾಜ್ಯದಲ್ಲಿ ನೀರಾವರಿ ಸಚಿವನಾಗಿದ್ದೆ. ನಮ್ಮ ರಾಜ್ಯದ ಕೆಲಸಗಳ ಮೇಲೆ ಹೋದಾಗ ಅವರು ಪಕ್ಷದ ಮಿತಿಯನ್ನು ಮೀರಿ, ಕರ್ನಾಟಕದ ಹಿತವನ್ನು ಕಾಯುತ್ತಿದ್ದರು. ನಮ್ಮನ್ನು ಎಲ್ಲಾ ಸಚಿವರು ಮತ್ತು ಅಧಿಕಾರಿಗಳ ಬಳಿಗೆ ಕರೆದುಕೊಂಡು ಹೋಗುತ್ತಿದ್ದರು. ಪ್ರತಾಪ್ ಸಿಂಹ ಥರದವರು ಅಂಥವರಿಂದ ಕಲಿಯಬೇಕಾಗಿದೆ. ಆದರೆ, ಬಿಜೆಪಿಯವರಿಗೆ ಈಗ ಅನಂತಕುಮಾರ್ ಅವರ ನೆನಪೂ ಇಲ್ಲ' ಎಂದು ತಿಳಿಸಿದರು.
ನಮ್ಮ ಬಿಎಲ್‌ಡಿಇ ಸಂಸ್ಥೆಯಿಂದ ದಾಸ ಸಾಹಿತ್ಯದ ಸಮಗ್ರ ಸಂಪುಟ ತರುತ್ತಿದ್ದೇವೆ. ಬ್ರಾಹ್ಮಣರಾದ ಕೃಷ್ಣ ಕೊಲ್ಹಾರ ಕುಲಕರ್ಣಿಯವರ ಸಂಪಾದಕತ್ವದಲ್ಲಿ ಆದಿಲ್‌ಶಾಹಿ ಸಂಪುಟಗಳನ್ನು ತಂದೆವು. ಹಾಗೆಯೇ ನಮ್ಮ ಸಂಸ್ಥೆಯಲ್ಲಿ ಸಾಕಷ್ಟು ಬ್ರಾಹ್ಮಣರಿದ್ದಾರೆ. ನನಗೆ ಚಿಕ್ಕಂದಿನಲ್ಲಿ ಪಾಠ ಕಲಿಸಿದ ದೇಶಪಾಂಡೆ, ಹಣಮಂತರಾವ್ ಅವರೆಲ್ಲ ಬ್ರಾಹ್ಮಣರೇ ಆಗಿದ್ದರು. 1998ರಲ್ಲಿ ನಾನು ಲೋಕಸಭೆ ಚುನಾವಣೆಗೆ ನಿಂತು ಗೆದ್ದಾಗ ವಿಜಯಪುರ ಕ್ಷೇತ್ರದ ಒಂದು ಲಕ್ಷಕ್ಕಿಂತಲೂ ಹೆಚ್ಚು ಬ್ರಾಹ್ಮಣ ಮತದಾರರ ಪೈಕಿ ಶೇಕಡ 90ರಷ್ಟು ಜನ ನನಗೆ ಮತ ಚಲಾಯಿಸಿದ್ದರು ಎಂದು ಉತ್ತರಿಸಿದರು.
ನಮ್ಮ ತಂದೆ ಮತ್ತು ನಾನು ಬ್ರಾಹ್ಮಣರ ಜತೆ ಮಧುರ ಸಂಬಂಧಕ್ಕೆ ಹೆಸರಾಗಿದ್ದೇವೆ. ಹಲಗಲಿಯ ದೇವಸ್ಥಾನ, ವಿಜಯಪುರದ ಹನುಮಂತನ ದೇವಸ್ಥಾನ ಸೇರಿದಂತೆ ಬ್ರಾಹ್ಮಣ ಸಮುದಾಯದ ಅನೇಕ ಕೆಲಸಗಳನ್ನು ನಾನು ಹೃತ್ಪೂರ್ವಕವಾಗಿ ಮಾಡಿಕೊಟ್ಟಿದ್ದೇನೆ. ಹಾಗೆಯೇ ಆ ಸಮಾಜವೂ ನನ್ನೊಂದಿಗೆ ಅಭಿಮಾನದಿಂದ ಗುರುತಿಸಿಕೊಂಡಿದೆ. ಇವೆಲ್ಲ ಗೊತ್ತಿಲ್ಲದೆ ಪ್ರತಾಪ್ ಸಿಂಹ ಕೀಳು ಅಭಿರುಚಿಯ ವಿಕೃತಿಯನ್ನು ತೋರಿಸುತ್ತಿದ್ದಾರೆ. ಇನ್ನುಮುಂದೆ ನಾನು ಅವರ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.