ಬಡ ವಿದ್ಯಾರ್ಥಿಗೆ ನೆರವಿನ ಹಸ್ತ ಚಾಚಿದ ಸಚಿವ ಎಂ.ಬಿ. ಪಾಟೀಲ

MINISTER M B PATIL GIVE CHECK
ವಿಜಯಪುರ ನಗರದ ಗೃಹ ಕಚೇರಿಯಲ್ಲಿ ಸಚಿವ ಎಂ.ಬಿ. ಪಾಟೀಲರು ವಿದ್ಯಾರ್ಥಿ ಕಿರಣ ಶಂಕರ ಚವಾಣ್‌ಗೆ ಚೆಕ್ ಹಸ್ತಾಂತರಿಸಿದರು. ಡಾ.ಆರ್.ವಿ. ಕುಲಕರ್ಣಿ, ರಮಾ ಶಂಕರ ಚವಾಣ್ ಇದ್ದಾರೆ.
Published on

ವಿಜಯಪುರ: ಬ್ಯಾಚುಲರ್ ಆಫ್ ಇಂಜಿನಿಯರಿಂಗ್(ಬಿ.ಇ) ಪದವಿಗಾಗಿ ಡಿಪ್ಲೊಮಾ ವಿಭಾಗದಿಂದ ನಡೆದ ಸಿಇಟಿ(ಲ್ಯಾಟರಲ್ ಎಂಟ್ರಿ)ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಪ್ರತಿಭಾವಂತ ಬಡ ವಿದ್ಯಾರ್ಥಿಯ ಶಿಕ್ಷಣಕ್ಕಾಗಿ ಸಹಾಯ ಧನ ನೀಡುವ ಮೂಲಕ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಸಹಾಯ ಹಸ್ತ ಚಾಚಿದರು.

ನಗರದ ಗೃಹ ಕಚೇರಿಯಲ್ಲಿ ಬುಧವಾರ ತಮ್ಮನ್ನು ಭೇಟಿ ಮಾಡಿದ ಸ್ಪಿನ್ನಿಂಗ್ ಮಿಲ್ ತಾಂಡಾದ ನಿವಾಸಿಯಾಗಿರುವ ವಿದ್ಯಾರ್ಥಿ ಕಿರಣ ಶಂಕರ ಚವಾಣ್‌ಗೆ ಬಿಎಲ್‌ಡಿಇ ಸಂಸ್ಥೆಯಿಂದ 1.20 ಲಕ್ಷ ಮೊತ್ತದ ಚೆಕ್ ವಿತರಿಸಿದ ಸಚಿವರು, ಮುಂದಿನ ಶೈಕ್ಷಣಿಕ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

ಸದ್ಯ ಸಾಯಿ ಪಾರ್ಕ್‌ನಲ್ಲಿ ವಾಸಿಸುತ್ತಿರುವ ಶಂಕರ ಹಾಗೂ ರಮಾ ದಂಪತಿಯ ಪುತ್ರ ಕಿರಣ ಡಿಪ್ಲೊಮಾ ಸಿಇಟಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಬಿಇಗಾಗಿ ಬೆಂಗಳೂರಿನ ಆರ್.ವಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿ ಸೀಟು ಪಡೆದಿದ್ದಾರೆ. ಸೀಟು ಸಿಕ್ಕರೂ ಪ್ರವೇಶ ಪಡೆಯಲು ತೊಂದರೆ ಅನುಭವಿಸುತ್ತಿದ್ದ ವಿದ್ಯಾರ್ಥಿಗೆ ಸಚಿವ ಎಂ.ಬಿ. ಪಾಟೀಲ ಸಹಾಯ ಹಸ್ತ ಚಾಚಿದರು. ಅಲ್ಲದೇ, ಈ ವಿದ್ಯಾರ್ಥಿಯ ಬಿಇ ಪದವಿ ಅಧ್ಯಯನಕ್ಕೆ ಮೂರು ವರ್ಷಗಳ ಶಿಕ್ಷಣಕ್ಕೆ ಅಗತ್ಯವಾದ ವೆಚ್ಚವನ್ನೂ ಭರಿಸುವ ಭರವಸೆ ನೀಡಿದರು.

ಬಿಎಲ್ಡಿಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಡೀಮ್ಡ್ ವಿವಿ ರಜಿಸ್ಟ್ರಾರ್ ಡಾ.ಆರ್.ವಿ. ಕುಲಕರ್ಣಿ, ವಿದ್ಯಾರ್ಥಿಯ ತಂದೆ ಶಂಕರ ಹಾಗೂ ತಾಯಿ ರಮಾ ಮತ್ತಿತರರಿದ್ದರು. ಸಚಿವರ ನೆರವಿಗೆ ವಿದ್ಯಾರ್ಥಿ ಮತ್ತು ಪಾಲಕರು ಕೃತಜ್ಞತೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net