

ವಿಜಯಪುರ: ಮನಸ್ಸಿದ್ದರೆ ಮಾರ್ಗ ಎಂಬುದಕ್ಕೆ ಇಟ್ಟಂಗಿಹಾಳದ ಕೆರೆ ತುಂಬಿಸಿರುವ ಕಾರ್ಯವೇ ಸಾಕ್ಷಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.
ಜಲಸಂಪನ್ಮೂಲ ಇಲಾಖೆಯ ವತಿಯಿಂದ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಇಟ್ಟಂಗಿಹಾಳ ಕೆರೆಗೆ ಶನಿವಾರ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಅತಿ ಎತ್ತರದ ಪ್ರದೇಶವಾಗಿರುವ ಇಟ್ಟಂಗಿಹಾಳಕ್ಕೆ ನೀರು ಹರಿಸುವುದು ಕಷ್ಟಕರ ಹಾಗೂ ಕಷ್ಟಸಾಧ್ಯವಾಗಿತ್ತು. ಛಲ ಹಾಗೂ ದೃಢ ಸಂಕಲ್ಪದೊಂದಿಗೆ ಕೆರೆತುಂಬುವ ಯೋಜನೆ ಕೈಗೆತ್ತಿಕೊಳ್ಳಲಾಯಿತು. 1,15000 ಎಚ್.ಪಿ. ಸಾಮರ್ಥ್ಯವುಳ್ಳ 5 ಮೋಟರ್ ಬಳಸಿ ಇಟ್ಟಂಗಿಹಾಳ ಕೆರೆ ತುಂಬಿಸಲಾಗಿದೆ. ಕಳೆದ 20 ವರ್ಷಗಳ ಹಿಂದೆ ನಾನು ನಿರ್ಮಿಸಿದ ಕೆರೆಗೆ ಇಂದು ಬಾಗಿನ ಅರ್ಪಿಸಿದ್ದು ಅತ್ಯಂತ ಸಂತಸ ತಂದಿದ್ದು, ಈ ಭಾಗದ ಅಂತರ್ಜಲ ಮಟ್ಟ ಹೆಚ್ಚಾಗಿ ರೈತರಿಗೆ ಅನುಕೂಲವಾಗಲಿದೆ ಎಂದರು.
ಈ ಭಾಗದಲ್ಲಿ ಕೆರೆಗಳಿಗಿಂತಲೂ ಹೆಚ್ಚು ವಿಸ್ತ್ರೀರ್ಣ ಹೊಂದಿದ 120 ಬಾಂದಾರ್‌ಗಳನ್ನು ತುಂಬಿಸಲಾಗಿದೆ. ಇಟ್ಟಂಗಿಹಾಳ ಕೆರೆಯ ಪಕ್ಕದಲ್ಲಿರುವ 60 ಎಕರೆ ಸರ್ಕಾರಿ ಜಮೀನು ಬಳಸಿಕೊಂಡು, ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ ಇನ್ನಷ್ಟು ಅಭಿವೃದ್ಧಿಪಡಿಸಿ ಇಟ್ಟಂಗಿಹಾಳ ಕೆರೆ ವಿಸ್ತ್ರೀರ್ಣ ದ್ವಿಗುಣಗೊಳಿಸಿ, ನೀರಿನ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು ಎಂದರು.
ತಿಕೋಟಾ ತಾಲೂಕಿನ ಸಣ್ಣ ನೀರಾವರಿ ವ್ಯಾಪ್ತಿಯಲ್ಲಿ ಬರುವ 21, ಜಿಲ್ಲಾ ಪಂಚಾಯತ್ ವ್ಯಾಪ್ತಿಯ 7, ಗ್ರಾಮ ಪಂಚಾಯತ್ ವ್ಯಾಪ್ತಿಯ 2 ಹಾಗೂ ಪಟ್ಟಣ ಪಂಚಾಯತ್ ವ್ಯಾಪ್ತಿಯ 2 ಕೆರೆಗಳು ಸೇರಿದಂತೆ ಒಟ್ಟು 32 ಕೆರೆಗಳು ಹಾಗೂ ಬಬಲೇಶ್ವರ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯ 14, ಜಿಲ್ಲಾ ಪಂಚಾಯತ್ ವ್ಯಾಪ್ತಿಯ 11, ಪಟ್ಟಣ ಪಂಚಾಯತ್ ವ್ಯಾಪ್ತಿಯ 2 ಸೇರಿದಂತೆ ಒಟ್ಟು 27 ಕೆರೆಗಳನ್ನು ತುಂಬಿಸಲಾಗಿದ್ದು, ಈ ಭಾಗದಲ್ಲಿ ಅಂತರ್ಜಲಮಟ್ಟ ಹೆಚ್ಚಿಸಿ ಮಾದರಿ ಜಿಲ್ಲೆಯನ್ನಾಗಿ ರೂಪಿಸಲಾಗುವುದು ಎಂದರು.
2013-18ರ ಅವಧಿಯಲ್ಲಿ ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿ ತಿಕೋಟಾ ಹೊಬಳಿವೊಂದಕ್ಕೆ 3600 ಕೋಟಿ ರೂ.ಗಳನ್ನು ನೀರಾವರಿ ಯೋಜನೆಗಳಿಗೆ ಒದಗಿಸಲಾಗಿದೆ. ಅದರಂತೆ ಏಷ್ಯಾದ ಅತಿ ಉದ್ದವಾದ (14.75 ಕಿ.ಮೀ.)ತಿಡಗುಂದಿ ಅಕ್ವಾಡೆಕ್ಟ್ ನಿರ್ಮಾಣ ಮಾಡುವ ಮೂಲಕ ಕೃಷ್ಣಾ ನದಿಯ ನೀರನ್ನು ಭೀಮೆಯ ಒಡಲಿಗೆ ತರುವ ಮಹತ್ವಕಾರ್ಯ ಮಾಡಲಾಗಿದೆ ಎಂದರು.
ಜಿಲ್ಲೆಯ ಕೆನಾಲ್ ನೆಟವರ್ಕ್‌ಗಳಲ್ಲಿ ಕಾಲುವೆ ಜಾಲಗಳ 165 ಹಳ್ಳಗಳಿಗೆ ಚೆಕ್‌ಡ್ಯಾಂ ನಿರ್ಮಾಣ ಮಾಡಿ ನೀರು ಇಂಗಿಸುವ ಮೂಲಕ ಅಂತರ್ಜಲಮಟ್ಟ ಹೆಚ್ಚಿಸಿ ನೀರಾವರಿಗೊಳಪಡಿಸಿ ರೈತರಿಗೆ ಅನುಕೂಲ ಕಲ್ಪಿಸುವ ಮೂಲಕ ಬರದ ನಾಡಿನ ಹಣೆಪಟ್ಟಿ ತೆಗೆಯಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದರು.
ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಂಬಣ್ಣ ಹರಳಯ್ಯ, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಜಯ ವಸ್ತ್ರದ, ತಿಕೋಟಾ ತಹಸೀಲ್ದಾರ್ ಸುರೇಶ ಚವಲರ, ಜಿಪಂ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೊಟೆ, ಭೀಮಸಿಂಗ ಮಹಾರಾಜ್, ಸಿದ್ದು ಗೌಡನವರ, ಡಿ.ಆರ್. ನಿಡೋಣಿ, ರಾಜುಗೌಡ ಬಿರಾದಾರ, ಬಾಬು ಗುಲಗಂಜಿ, ಹಣಮಂತ ಮುಚ್ಚಂಡಿ, ಬಿ.ಟಿ.ರಾಠೋಡ ಮತ್ತಿತರರಿದ್ದರು.