

ಮಂಡ್ಯ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಿಂದೆ ವೀರಶೈವ ಲಿಂಗಾಯತರಿಗೆ ರಾಜಕೀಯದಲ್ಲಿ ಉನ್ನತ ಅಧಿಕಾರ ತಪ್ಪಿಸುವ ಮೂಲಕ ಬಹುದೊಡ್ಡ ಅನ್ಯಾಯ ಮಾಡಿದ್ದನ್ನು ಸಮುದಾಯದ ಜನರು ಮರೆಯಬಾರದು ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.
ನಗರದ ಕನಕಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ವೀರಶೈವ ಲಿಂಗಾಯತ ಮುಖಂಡರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, 2008ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆ ಮಾಡಿದವು. ಒಪ್ಪಂದದಂತೆ ಮೊದಲ ಅವಧಿಯಲ್ಲಿ ಎಚ್‌ಡಿಕೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿ ಅಧಿಕಾರ ಅನುಭವಿಸಿದರು. ಇನ್ನುಳಿದ 20 ತಿಂಗಳ ಅವಧಿಗೆ ಲಿಂಗಾಯತ ಸಮುದಾಯದ ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕಾಗಿತ್ತು. ಆದರೆ ಬಿಎಸ್‌ವೈಗೆ ಸ್ಥಾನಮಾನ ಕಲ್ಪಿಸದೆ ಸಮುದಾಯಕ್ಕೆ ದೊಡ್ಡ ಅನ್ಯಾಯ ಮಾಡಿದ್ದರು ಎಂದು ಆರೋಪಿಸಿದರು.
ಬಿಜೆಪಿ ಸಮಾನತೆಯ ಹರಿಕಾರ ಬಸವಣ್ಣನವರ ತತ್ವ, ಸಿದ್ಧಾಂತವನ್ನು ಎಂದಿಗೂ ಒಪ್ಪುವುದಿಲ್ಲ. ಅಷ್ಟೇ ಅಲ್ಲದೆ ಬಸವಣ್ಣ ಅವರನ್ನ ಸಾಂಸ್ಕೃತಿಕ ನಾಯಕ ಎಂಬುವುದನ್ನು ಒಪ್ಪುವುದಿಲ್ಲ. ಆದರೆ ಕಾಂಗ್ರೆಸ್ ಅಂಬೇಡ್ಕರ್ ಅವರ ಸಂವಿಧಾನ ಮತ್ತು ಬಸವಣ್ಣನವರ ಸಿದ್ಧಾಂತದ ಮೇಲೆ ಹೆಚ್ಚಿನ ನಂಬಿಕೆ ಇಟ್ಟಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ. ವೀರಶೈವ ಲಿಂಗಾಯತ ಸಮುದಾಯ ಓಲೈಕೆ ಮಾಡಲು ಇಂತಹ ತಂತ್ರ ಮಾಡಿರುವ ಬಿಜೆಪಿ ವರಿಷ್ಠರು, ಕೇವಲ 3 ವರ್ಷ ಮಾತ್ರ ರಾಜ್ಯಾಧ್ಯಕ್ಷ ಎಂದು ವಿಜಯೇಂದ್ರ ಅವರಿಗೆ ನಿಗದಿ ಮಾಡಿದೆ. ಅಷ್ಟರೊಳಗೆ ಎಲ್ಲ ಚುನಾವಣೆ ಮುಗಿಯುತ್ತದೆ. ಇನ್ನೇಕೆ ಅವರು ಎಂಬ ಭಾವನೆ ಇಟ್ಟುಕೊಂಡಿದೆ. ಇದಲ್ಲದೆ ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಪಕ್ಷದ ಅಧ್ಯಕ್ಷ ಸ್ಥಾನವು ಲಿಂಗಾಯತ ಸಮುದಾಯದ ಕೈತಪ್ಪಲಿದೆ. ಆದರೆ ಕಾಂಗ್ರೆಸ್ ಪಕ್ಷ ಸಮುದಾಯದ ಹೆಚ್ಚಿನವರನ್ನು ಮುಖ್ಯಮಂತ್ರಿಯಾಗಲು ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ಕಾಂಗ್ರೆಸ್ ಜನರ ಬದುಕು ಕಟ್ಟುವ ಕೆಲಸ ಮಾಡುತ್ತಿದ್ದರೆ, ಬಿಜೆಪಿ ಜನರ ಭಾವನೆ ಕೆರಳಿಸುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿ ನಾಯಕರು ಪ್ರಶ್ನಿಸುತ್ತಾರೆ. ನಿಜವಾಗಿಯೂ ದೇಶ ಕಟ್ಟಿದ್ದು ಕಾಂಗ್ರೆಸ್ ನಾಯಕರು, ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟದ್ದು ಕಾಂಗ್ರೆಸ್. ಮಾತ್ರವಲ್ಲದೆ ಸಾವಿರಾರು ಅಣೆಕಟ್ಟು, ಕೈಗಾರಿಕೆ ನಿರ್ಮಾಣ ಮಾಡಿದೆ. ಆಹಾರ ಉತ್ಪಾದನೆಯಲ್ಲಿ ಕ್ರಾಂತಿ ಮಾಡಿದೆ. ಆದರೆ ಹಳೆ ಮೈಸೂರು ಭಾಗದಲ್ಲಿ ಒಂದು ಅಣೆಕಟ್ಟು ನಿರ್ಮಾಣ ಮಾಡದ ಬಿಜೆಪಿ ಅಭಿವೃದ್ಧಿ ಮಂತ್ರ ಜಪಿಸುತ್ತಿದೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಉದ್ಯೋಗ ಸೃಷ್ಟಿ ಇಲ್ಲದೆ ನಿರುದ್ಯೋಗ ತಾಂಡವವಾಡುತ್ತಿದೆ. ನೋಟ್‌ಬ್ಯಾನ್ ಮಾಡಿ ತಪ್ಪು ಮಾಡಿದೆ. ಇದೀಗ ಚುನಾವಣಾ ಬಾಂಡ್ ಹಗರಣ ದೊಡ್ಡ ಮಟ್ಟದ್ದಾಗಿದ್ದು, ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಹೆದರಿಸಿ ಬೆದರಿಸಿ ಚುನಾವಣಾ ಬಾಂಡ್ ನೆಪದಲ್ಲಿ ಸುಲಿಗೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಮಹಿಳೆಯರಿಗೆ ಹೆಚ್ಚಿನ ಸವಲತ್ತು ದೊರಕಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೇಂದ್ರದಿಂದ ಹೆಚ್ಚಿನ ಗ್ಯಾರಂಟಿ ಯೋಜನೆಯ ಲಾಭ ಮಹಿಳೆಯರು, ರೈತರು, ಕಾರ್ಮಿಕರಿಗೆ ಸಿಗಲಿದೆ. ಅಂತೆಯೇ ಮುಂದಿನ ದಿನಗಳಲ್ಲಿ ವೀರಶೈವ ಲಿಂಗಾಯತ ಸಮುದಾಯದ ಜನತೆಗೆ ರಾಜಕೀಯ ಸ್ಥಾನಮಾನ ದೊರಕಿಸಿಕೊಡಲು ಬದ್ಧನಾಗಿರುವುದಾಗಿ ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಮಾತನಾಡಿ, ಜಿಲ್ಲೆಯ ಜನತೆ ಅವಕಾಶಕೊಟ್ಟಾಗ ಏನು ಮಾಡದ ಎಚ್.ಡಿ.ಕುಮಾರಸ್ವಾಮಿ ಸಂಸದರಾಗಿ ಏನು ಮಾಡಲು ಸಾಧ್ಯ. ಅವರ ತಂದೆಗಿಂತಲೂ ದೊಡ್ಡ ನಾಯಕರಾಗಲು ಸಾಧ್ಯವೇ?. ಕಾವೇರಿ ವಿಚಾರದಲ್ಲಿ ಎಚ್.ಡಿ.ದೇವೇಗೌಡ ಪ್ರಧಾನಿಯಾಗಿದ್ದಾಗ ಏನು ಮಾಡಲಿಲ್ಲ. ಈಗ ಕುಮಾರಸ್ವಾಮಿ ಏನು ಮಾಡಲಿದ್ದಾರೆ. ಇಷ್ಟೊಂದು ಸುಳ್ಳು ಹೇಳುವ ಅವಶ್ಯಕತೆ ಇದೆಯಾ ಎಂದು ಪ್ರಶ್ನಿಸಿದರು.
ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಿದ ಎಚ್.ಡಿ.ಕುಮಾರಸ್ವಾಮಿ ಅನಂತರವೂ ಅವರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಾ, ಯಡಿಯೂರಪ್ಪರನ್ನ ಜೈಲಿಗೆ ಕಳುಹಿಸಲು ಸತತವಾಗಿ ಮುಂದಾದರು. ಅಷ್ಟರ ಮಟ್ಟಿಗೆ ಕಿರುಕುಳ ನೀಡಿದ್ದನ್ನು ಜನತೆ ಮರೆಯುವುದಿಲ್ಲ. ಮಂಡ್ಯ ಜಿಲ್ಲೆಗೆ ಎಚ್‌ಡಿಕೆ ಯಾವುದಾದರೂ ಕೊಡುಗೆ ನೀಡಿದ್ದಾರಾ?. ನಿಜವಾಗಲೂ ಅವರ ಕೊಡುಗೆ ಬಿಗ್ ಝೀರೋ. ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದೇನೆ ಅವಕಾಶ ಕೊಡಿ ಎಂದು ಮನವಿ ಮಾಡಬೇಕು. ಆದರೆ ಇಲ್ಲಸಲ್ಲದ ಸುಳ್ಳು ಭರವಸೆಗಳನ್ನು ಹೇಳಿದರೆ ಜನರು ನಂಬಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಶಾಸಕರಾದ ರವಿಕುಮಾರ್ ಗಣಿಗ, ದರ್ಶನ್ ಪುಟ್ಟಣ್ಣಯ್ಯ, ರಮೇಶ ಬಂಡಿಸಿದ್ದೇಗೌಡ, ಮಾಜಿ ಶಾಸಕ ಎಂ.ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್ ಇತರರಿದ್ದರು. ಇದೇ ವೇಳೆ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಬಿಜೆಪಿ-ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.