

ಬೆಂಗಳೂರು:ನಾನು ನೀರಾವರಿ ಸಚಿವನಾಗಿದ್ದಾಗ ರಾಜ್ಯದ ಕೆರೆಗಳಿಗೆ ನೀರು ತುಂಬಿಸುವ ತೀರ್ಮಾನ ಮಾಡಿದ್ದೆ. ಇದರಿಂದಾಗಿ 6 ಸಾವಿರ ಕೆರೆಗಳಿಗೆ ಮತ್ತೆ ಜೀವ ಬಂತು. ಇದರ ಹಿಂದೆ ವಚನಕಾರ ಸಿದ್ಧರಾಮೇಶ್ವರರ ಕಾಯಕ ಸಮಾಜ ನಿರ್ಮಾಣದ ಪ್ರೇರಣೆ ಇತ್ತು ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ನೊಳಂಬ ಲಿಂಗಾಯತ ಸಂಘ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ 2 ದಿನಗಳ "ಶ್ರೀ ಗುರು ಸಿದ್ಧರಾಮೇಶ್ವರ ಜಯಂತಿ' ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಬುಧವಾರ ಮಾತನಾಡಿದರು.
ಬಸವಣ್ಣನವರು ಕಾಯಕ ಸಮಾಜ ನಿರ್ಮಾಣಕ್ಕೆ ಕರೆ ನೀಡಿದ್ದರು. ಆದರೆ, ದೇವಸ್ಥಾನ, ಕೆರೆಕಟ್ಟೆ ಮತ್ತು ಜಮೀನಿಗೆ ನೀರಾವರಿ ಸೌಕರ್ಯ ವ್ಯವಸ್ಥೆಯ ಮೂಲಕ ಸಿದ್ಧರಾಮೇಶ್ವರರು, ಬಸವಣ್ಣನವರ ಕನಸು ನನಸು ಮಾಡಿದರು. ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಅವಿಭಜಿತ ವಿಜಯಪುರ ಭಾಗಗಳಲ್ಲಿ ಸಿದ್ಧರಾಮೇಶ್ವರರ ಪ್ರಭಾವ ಇಂದಿಗೂ ಗಾಢವಾಗಿದೆ. ತುಮಕೂರಿನ ಭಾಗದಲ್ಲಿ ನೊಳಂಬ ಲಿಂಗಾಯತ ಸಮುದಾಯ ಸಿದ್ಧರಾಮೇಶ್ವರರ ಮೇಲೆ ಅತೀವ ಭಕ್ತಿ ಹೊಂದಿ, ಅವರ ಹೆಸರನ್ನು ಶಾಶ್ವತಗೊಳಿಸಿದೆ. ಫ.ಗು.ಹಳಕಟ್ಟಿ ವಚನ ಸಂಶೋಧನಾ ಕೇಂದ್ರದ ಮೂಲಕ ಸಿದ್ಧರಾಮೇಶ್ವರರ ವಚನ ಸಂಪುಟವನ್ನು ಪ್ರಕಟಿಸಲಾಗಿದೆ. ವಿಜಯಪುರದಲ್ಲಿ ಅವರ ಹೆಸರಿನ ದೇಗುಲವೇ ಇದೆ ಎಂದು ಹೇಳಿದರು.
ಸೊಲ್ಲಾಪುರ ಸಿದ್ದರಾಮೇಶ್ವರರ ಕಾಯಕ ಕ್ಷೇತ್ರ. ವಿಜಯಪುರ, ಸೊಲ್ಲಾಪುರದ ವ್ಯಾಪಾರಿಗಳಿಗೆ ಅನ್ಯೋನ್ಯ ಸಂಬಂಧವಿದ್ದು, ಅಲ್ಲಿನ ವ್ಯಾಪಾರಿಗಳೆಲ್ಲ ಸೇರಿ ಸಿದ್ದರಾಮೇಶ್ವರರ ಹೆಸರಲ್ಲಿ ದೇವಾಲಯ ನಿರ್ಮಿಸಿದ್ದರು. ವಿಜಯಪುರದಲ್ಲಿ 2ನೇ ದೇಗುಲವಿದ್ದು, ಸಿದ್ದೇಶ್ವರ ಸಂಸ್ಥೆ ಅಡಿಯಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಬಹಳಷ್ಟು ಪ್ರಗತಿ ಸಾಧಿಸಿದೆ ಎಂದು ಸಚಿವರು ತಿಳಿಸಿದರು.
ತಿಪಟೂರಿನ ಗುರುಕುಲಾನಂದಾಶ್ರಯದ ಶ್ರೀ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ, ಗುಬ್ಬಿ ತಾಲೂಕಿನ ಬೆಟ್ಟದಹಳ್ಳಿಯ ಗವಿಮಠದ ಅಧ್ಯಕ್ಷ ಶ್ರೀ ಚಂದ್ರಶೇಖರ ಸ್ವಾಮೀಜಿ, ಮಾಜಿ ಸಭಾಪತಿ ಬಿ.ಎಲ್.ಶಂಕರ್, ಶಾಸಕರಾದ ಕೆ.ಷಡಾಕ್ಷರಿ, ಎಚ್.ಡಿ.ತಮ್ಮಯ್ಯ, ಎಚ್.ಕೆ.ಸುರೇಶ್, ಬಸವರಾಜ್ ನೀ. ಶಿವಣ್ಣನವರ್, ಮಾಜಿ ಶಾಸಕ ಅಶೋಕ್ ಖೇಣಿ, ಸ್ವಾಗತ ಸಮಿತಿ ಅಧ್ಯ ಸಿದ್ಧರಾಮಪ್ಪ ಮತ್ತಿತರರಿದ್ದರು.
12ನೇ ಶತಮಾನದಲ್ಲಿ ಬಸವಪರ ಕ್ರಾಂತಿ ಕಹಳೆ ಮೊಳಗಿತ್ತು. ವಚನಗಳನ್ನು ಅರ್ಥ ಮಾಡಿಕೊಂಡರೆ ಇಷ್ಟಲಿಂಗ ಧಾರಣೆಯ ಮಹತ್ವ ತಿಳಿಯುತ್ತದೆ. ಸಿದ್ದರಾಮೇಶ್ವರರ ದ್ಯೇಯೋದ್ದೇಶ, ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.
| ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಸುತ್ತೂರು ಕ್ಷೇತ್ರ.