

ಬೆಳಗಾವಿ: ಕೃಷ್ಣಾ ಮೇಲ್ದಂಡೆ ಯೋಜನೆಯ ಮುಳುಗಡೆ ಸಂತ್ರಸ್ಥರಿಗೆ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ 5 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದರು ಎಂದು ಮುರುಗೇಶ ನಿರಾಣಿ ಅವರು ಹೇಳುತ್ತಾರೆ. ಆದರೆ, ಸಂತ್ರಸ್ಥರಿಗೆ ಒಂದು ರೂಪಾಯಿಯನ್ನೂ ನೀಡಿಲ್ಲ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಳುಗಡೆ ಸಂತ್ರಸ್ತರ ಪೈಕಿ ಇಬ್ಬರಿಗಷ್ಟೇ ಸಾಂಕೇತಿಕವಾಗಿ ಕೊಟ್ಟಿದ್ದಾರೆ. ಅವರಿಗೂ ಇನ್ನೂ ಹಣ ಮುಟ್ಟಿಲ್ಲ. ಸುಮ್ಮನೇ ಕಣ್ಣೊರೆಸುವ ತಂತ್ರ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಿಂದ ಕೃಷ್ಣಾ ತೀರದ ಜನರಿಗೆ ಅನ್ಯಾಯವಾಗಿದೆ ಎಂದು ನಿರಾಣಿ ಅವರು ಹೇಳುವುದು ಸರಿಯಲ್ಲ. ಅವರೇನೂ ಮಾಡಿದ್ದಾರೆ ಎಂದು ಹೇಳಲಿ ಎಂದರು.
ಹಿಂದಿನ ಸರ್ಕಾರದಲ್ಲಿ ಬಜೆಟ್‌ಗಿಂತ ಹೆಚ್ಚುವರಿ ಹಣದ ಟೆಂಡರ್ ಕರೆದಿದ್ದಾರೆ. ಉದಾಹರಣೆಗೆ ಲೋಕೋಪಯೋಗಿ ಇಲಾಖೆಯ ಕಾಮಗಾರಿಯಲ್ಲಿ ಬಜೆಟ್‌ಗಿಂತ 4000-5000 ಕೋಟಿ ರೂ. ಹೆಚ್ಚುವರಿ ಟೆಂಡರ್ ಕರೆದಿದ್ದಾರೆ. ನೀರಾವರಿ ಇಲಾಖೆಯಲ್ಲಿ 10-15 ಸಾವಿರ ಕೋಟಿ ರೂ. ಹೆಚ್ಚುವರಿ ಟೆಂಡರ್ ಮಾಡಿದ್ದಾರೆ. ಇದೆಲ್ಲವೂ ಯಾಕೇ ಅನ್ನುವುದು ಚೆನ್ನಾಗಿ ಗೊತ್ತಿದೆ ಎಂದರು.
ನಮ್ಮ ಗ್ಯಾರಂಟಿ ಯೋಜನೆಗಳಿಗೆ 32 ಸಾವಿರ ಕೋಟಿ ರೂ. ಕೊಟ್ಟಿದ್ದೇವೆ. ಇದರೊಂದಿಗೆ ಹೊಸ ಯೋಜನೆ ಘೋಷಿಸಿದ್ದೇವೆ. 8-9 ತಿಂಗಳಲ್ಲಿ ಹೊಸ ಬಜೆಟ್ ಬರುತ್ತದೆ. ಆಗ ಹೆಚ್ಚಿನ ಯೋಜನೆಗಳಿಗೆ ಹಣ ಮೀಸಲಿಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಲಿಂಗಾಯತ ಮಠಗಳಿಗೆ ಹಣ ಮೀಸಲಿಟ್ಟಿಲ್ಲ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಿಂದಿನ ಸರ್ಕಾರದಲ್ಲಿ ಬಜೆಟ್‌ಗಿಂತ ಹೆಚ್ಚು ಹಣ ಖರ್ಚು ಮಾಡಿದ್ದಕ್ಕೆ ಅನುಧಾನ ಕೊಟ್ಟಿಲ್ಲ. ಬಿಬಿಎಂಪಿಯಲ್ಲಿ 40- 50 ಸಾವಿರ ಕೋಟಿ ರೂ. ಅನುದಾನ ವಿಲ್ಲದೇನೆ ಖರ್ಚು ಮಾಡಿ ಗಾಡಿ ಹೊಡೆದು ಹೋಗಿ ಬಿಟ್ಟಿದ್ದಾರೆ. ಯಾವ ಉದ್ದೇಶಕ್ಕೆ ಹೀಗೆ ಮಾಡಿದ್ದೀರಿ? ನಿಮ್ಮ ಅನುದಾನಕ್ಕೆ ಸೀಮಿತವಾಗಿರಬೇಕಿತ್ತಲ್ವೇ? ಹಣವಿಲ್ಲದೇ ಟೆಂಡರ್ ಕರೆದಿರುವ ಉದ್ದೇಶವೇನು? ಈ ಎಲ್ಲದನ್ನು ಮಾಡಿ ಬಿಲ್ ಪೆಂಡಿಂಗ್ ಇಟ್ಟು ಹೋಗಿದ್ದಾರೆ. ಹಾಗಾಗಿ ಸಿಎಂ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ ಎಳೆ ಎಳೆಯಾಗಿ ಹೇಳಿದ್ದಾರೆ. ಬಿಜೆಪಿಯವರ ಭ್ರಷ್ಟಾಚಾರ ವಿವರಿಸಿದ್ದಾರೆ. ಬಿಜೆಪಿಯಲ್ಲಿನ ಅಕ್ರಮಗಳ ಕುರಿತು ತನಿಖೆ ಆರಂಭವಾಗಿದೆ ಎಂದರು.
ರಾಜಕೀಯ ಬೇರೆಸಬೇಡಿ: ಹಿರೇಕೋಡಿ ಜೈನ ಮುನಿಗಳನ್ನು ಅಮಾನುಷವಾಗಿ ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಆ ನಿಟ್ಟಿನಲ್ಲಿ ಸರ್ಕಾರ ಹಾಗೂ ಗೃಹ ಸಚಿವರು ಕ್ರಮ ಕೈಗೊಳ್ಳುತ್ತಾರೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಂದು ಧರ್ಮದ ತುಷ್ಟಿಕರಣ ನಡೆಯುತ್ತಿದೆ. ಸರ್ಕಾರದ ಮೇಲೆ ನಂಬಿಕೆ ಇಲ್ಲ ಎಂದು ಶಾಸಕ ಅಭಯ್ ಪಾಟೀಲ ಅವರು ಹೇಳುವುದು ಸರಿಯಲ್ಲ. ಅಭಯ ಪಾಟೀಲರು ಇದರಲ್ಲಿ ರಾಜಕೀಯ ಬೆರೆಸಬಾರದು ಎಂದರು.