

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಲಪ್ರಭಾ ಜಲಾಶಯದಿಂದ ಕಾಲುವೆಗಳಿಗೆ ಹರಿಬಿಡಲಾಗಿರುವ ನೀರನ್ನು ಸ್ಥಳಗಿತಗೊಳಿಸುವ ನಿರ್ಧಾರವನ್ನು ರೈತರ ಬೇಡಿಕೆಯ ಹಿನ್ನೆಲೆಯಲ್ಲಿ ಬಿಟ್ಟು ಮಾ. 1ರವರೆಗೆ ನೀರು ಬಿಡುವಂತೆ ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷೆ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆದೇಶಿಸಿದ್ದಾರೆ.
ನೀರಾವರಿಗೆ ಒಳಪಡುವ ಕಾಲುವೆಗಳ ಮುಖಾಂತರ ಜಲಾಶಯದಿಂದ ಫೆ. 14ರವರೆಗೆ 16 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಎರಡೂ ಹಂಗಾಮು ಮುಗಿದಿದ್ದರೂ ನರಗುಂದ ಹಾಗೂ ಬಾದಾಮಿ ಶಾಸಕರು ಹಾಗೂ ರೈತ ಮುಖಂಡರು ಮಾ. 15ರವರೆಗೆ ಕಾಲುವೆಗಳಿಗೆ ನೀರು ಬಿಡುವಂತೆ ಸಚಿವೆ ಹೆಬ್ಬಾಳಕರ್ ಅವರಲ್ಲಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಸಚಿವೆ, ಜೂ. ಅಂತ್ಯದವರೆಗೆ ಕುಡಿಯುವ ಉದ್ದೇಶಕ್ಕಾಗಿ 15 ಟಿಎಂಸಿ ನೀರು ಕಾಯ್ದಿರಿಸಿ ಪೂರೈಸಲು ಸೂಚಿಸಿದ್ದಾರೆ. ಮಾ. 1ರೊಳಗೆ ಸಂಬ0ಧಪಟ್ಟ ಜಿಲ್ಲಾಡಳಿತಗಳು ಕುಡಿಯುವ ನೀರಿಗಾಗಿ ತಮ್ಮ ವ್ಯಾಪ್ತಿಯ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದ್ದಾರೆ.
ಬೇಸಿಗೆಯ ತೀವ್ರತೆ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ಬೇಡಿಕೆ ಹೆಚ್ಚಾಗುವುದರಿಂದ ನೀರನ್ನು ಹಿತಮಿತವಾಗಿ ನೀರು ಬಳಸಬೇಕು ಎಂದು ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ನವಿಲುತೀರ್ಥದ ಅಧೀಕ್ಷಕ ಇಂಜಿನಿಯರ್ ವಿ.ಎಸ್. ಮಧುಕರ ಮನವಿ ಮಾಡಿದ್ದಾರೆ.