ಬೋಗಸ್​ ಬಿಲ್​ ಬಗ್ಗೆ ತನಿಖಾ ತಂಡ ವಿಚಾರಣೆ: ಲಕ್ಷ್ಮಿ ಹೆಬ್ಬಾಳ್ಕರ್​

udp-14-lakshmi
Published on

ಉಡುಪಿ: ಕಳೆದ ಮೂರು ತಿಂಗಳಲ್ಲಿ ರಾಜ್ಯ ಸರ್ಕಾರ ಯಾವುದೇ ಹೊಸ ಯೋಜನೆ ಮಾಡಿಲ್ಲ. ಹೊಸ ಗುದ್ದಲಿ ಪೂಜೆ ಟೆಂಡರ್​ ಆದರೆ ಮಾತ್ರ ಕಮಿಷನ್​ ವಿಚಾರ ಬರುತ್ತದೆ. ಬಿಬಿಎಂಪಿ ವಿಚಾರದಲ್ಲಿ ಬಂದಿರುವ ಆರೋಪ ಬಗ್ಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಬೋಗಸ್​ ಬಿಲ್​ ಆಗಿದೆಯಾ ಎಂದು ತನಿಖಾ ತಂಡ ವಿಚಾರಣೆ ಮಾಡುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಗಾರಿಗಳು ನಡೆಯುತ್ತಿರುವಾಗ ಕಮಿಷನ್​ ವಿಚಾರ ಎಲ್ಲಿಂದ ಬರುತ್ತದೆ. ನಾವು ಕಮಿಷನ್​ ಕೇಳಿರುವ ಯಾವುದೇ ಪ್ರಕರಣಗಳಿಲ್ಲ. ಒಂದು ಕಿಲೋಮೀಟರ್​ ಕೆಲಸಕ್ಕೆ 10 ಕಿ.ಮೀ ಎಂದು ಬಿಲ್​ ಕೊಟ್ಟಿದ್ದಾರೆ. ಕೇವಲ 24 ಗಂಟೆಯಲ್ಲಿ ಮಂಜೂರಾತಿ ನೀಡಿ ಕೆಲಸ ಮುಗಿಸಿದ ಕಾಮಗಾರಿಗಳಿವೆ. ಸಮರ್ಪಕವಾಗಿ ಕೆಲಸ ಮಾಡಿದವರಿಗೆ ಬಿಲ್​ ಪಾವತಿಯಾಗುತ್ತದೆ. ನಾಲ್ಕು ವರ್ಷದ ಬಾಕಿ ಬಿಲ್​ ಒಂದೇ ಸಾರಿ ಬಾರಿ ಕೊಡುವುದು ಹೇಗೆ ಎಂದು ಪ್ರಶ್ನಿಸಿದರು.

ಬಿಜೆಪಿ ಸಾಲ ಮಾಡಿ ಹೋಗಿದೆ ಬೊಕ್ಕಸದ ಸ್ಥಿತಿ ಎಲ್ಲರಿಗೂ ಗೊತ್ತಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಫೈನಾನ್ಸ್​ ಎಕ್ಸಪರ್ಟ್​ ಎಂದು ನಾವು ಕರೆಯುತ್ತೇವೆ. ಯಾರಿಗೂ ಹೊರೆಯಾಗದಂತೆ ಐದು ಗ್ಯಾರಂಟಿಗಳನ್ನು ಕೊಡುತ್ತೇವೆ ಎಂದರು.

ಉಡುಪಿ ವಿಡಿಯೋ ಪ್ರಕರಣ ಸಿಐಡಿ ತನಿಖೆ ಯಾವ ಹಂತದಲ್ಲಿದೆ ಎಂದು ಹೇಳಲು ಆಗಲ್ಲ. ಈ ಪ್ರಕರಣದ ವಿಚಾರದಲ್ಲಿ ಸರ್ಕಾರ ,ಮುಖ್ಯಮಂತ್ರಿಗಳು ,ಪೊಲೀಸ್​ ಇಲಾಖೆ 24 ಗಂಟೆ ಅರ್ಲಟ್​ ಆಗಿದೆ. ಹೆಚ್ಚಿನ ತನಿಖೆಗೆ ಬೇಡಿಕೆ ಇತ್ತು , ಮುಖ್ಯಮಂತ್ರಿಗಳು ಸಿಐಡಿಗೆ ಕೊಟ್ಟಿದ್ದಾರೆ. ಸಿಐಡಿ ತಂಡ ಕಾಲೇಜಿಗೆ ಭೇಟಿ ಕೊಟ್ಟಿದೆ, ಸಂತ್ರಸ್ತೆಯ ಜೊತೆ ಮಾತುಕತೆ ನಡೆಸಿದೆ. ತನಿಖೆ ಪ್ರಗತಿಯಲ್ಲಿದೆ ಎಂದರು.

ಶಾಸಕ ಯಶ್ಪಾಲ್​ ಸುವರ್ಣ ಸಿಐಡಿ ತನಿಖೆ ಬಗ್ಗೆ ವಿಶ್ವಾಸವಿಲ್ಲ ಎಂದಿದ್ದಾರೆ. ಅವರು ನನ್ನ ಸಹೋದರರು, ವಿರೋಧ ಪಕ್ಷದಲ್ಲಿದ್ದಾರೆ. ಅವರು ಹಾಗೆ ಮಾತನಾಡಬೇಕಾಗುತ್ತದೆ. ಆ ಕಾರಣಕ್ಕೆ ಮಾತನಾಡುತ್ತಾರೆ. ಮಹಿಳೆಯರಿಗೆ ಮರ್ಯಾದೆ ಕೊಡುವ ಸರ್ಕಾರ. ಯಾವುದೇ ಸಮಾಜ, ಯಾರಿಗೆ ಅನ್ಯಾಯವಾದರೂ ನಾವು ಸಹಿಸಲ್ಲ. ನಿಫ್ಪಿಕ್ಷಪಾತವಾದ ತನಿಖೆ ಮಾಡುತ್ತೇವೆ ಎಂದರು.

ಉಡುಪಿ ಮತ್ತು ಮಣಿಪಾಲ ಪಬ್​ ಗಳಲ್ಲಿ ಅಬಕಾರಿ ಕಾರ್ಯಾಚರಣೆ ವಿಚಾರದಲ್ಲಿ ಪಬ್​ ಹೋಟೆಲ್​ ರೈಡ್​ ಆದರೆ ಬಿಜೆಪಿಗೆ ಏನು ಸಂಬಂಧವಿದೆ. ಬಿಜೆಪಿಯವರು ಹೇಗೆ ಟಾರ್ಗೆಟ್​ ಆಗ್ತಾರೆ? ಕಾಂಗ್ರೆಸ್​ ಯಾರನ್ನು ಟಾರ್ಗೆಟ್​ ಮಾಡಲ್ಲ. ಕಾನೂನು ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ, ಎಲ್ಲದಕ್ಕೂ ಒಂದು ನಿಯಮ ಇರುತ್ತದೆ, ಸಮಯ ನಿಗದಿಯಾಗಿರುತ್ತದೆ. ಕಾನೂನು ಚೌಕಟ್ಟಿನಲ್ಲಿ ಮಾಡಿದರೆ ಯಾರೂ ವಿರೋಧ ಮಾಡುವುದಿಲ್ಲ. ಕಾಂಗ್ರೆಸ್ಸಿಗೆ ಯಾರನ್ನು ಟಾರ್ಗೆಟ್​ ಮಾಡುವ ಅನಿವಾರ್ಯ ಸ್ಥಿತಿಯಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net