ಮರವಂತೆಯಲ್ಲಿ ಹೊರಬಂದರು ನಿರ್ಮಾಣ: ಲಕ್ಷ್ಮಿ ಹೆಬ್ಬಾಳ್ಕರ್​

UDP-24-3A-KDP
Published on

ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆಯಲ್ಲಿ ಹೊರಬಂದರು ಹಾಗೂ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಮರು ನಿಮಾರ್ಣ ಕೈಗೊಳ್ಳಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಮಾಹಿತಿ ನೀಡಿದರು.

ಉಡುಪಿಯ ಜಿಪಂ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಂಗೊಳ್ಳಿ ಮೀನುಗಾರಿಕಾ ಬಂದರು ಹಾಗೂ ಕೋಡಿ ಜೆಟ್ಟಿಯಲ್ಲಿ (ನ್ಯಾವಿಗೇಷನ್​ ಚಾನೆಲ್​) ಬಂದರು ಇಲಾಖೆ ಹಾಗೂ ಸಿಆರ್​ಜೆಡ್​ ಸಮನ್ವಯದೊಂದಿಗೆ ಹೂಳೆತ್ತುವ ಕಾಮಗಾರಿ ನಿರ್ವಹಿಸಲು ಸೂಚನೆ ನೀಡಿದ್ದಾಗಿ ತಿಳಿಸಿದರು.

  • ಹಲಗೆ ಅಳವಡಿಸಲು ಸೂಚನೆ: ಜಿಲ್ಲೆಯಲ್ಲಿ 604 ಕಿಂಡಿ ಅಣೆಕಟ್ಟುಗಳಿದ್ದು, 357 ಕಿಂಡಿ ಅಣೆಕಟ್ಟುಗಳಿಗೆ ತಡೆ ಹಲಗೆ ಅಳವಡಿಸಲಾಗಿದೆ. ಬಾಕಿ ಉಳಿದಿರುವ 343 ಕಿಂಡಿ ಅಣೆಕಟ್ಟುಗಳಿಗೂ ಮುಂದಿನ 15 ದಿನದೊಳಗೆ ತಡೆ ಹಲಗೆ ಅಳವಡಿಸಲು ಸೂಚಿಸಿದ್ದೇನೆ. ಉಪ್ಪು ನೀರು ಸಿಹಿ ನೀರಿಗೆ ಸೇರ್ಪಡೆ ಆಗುವುದನ್ನು ತಡೆಯುವ ಖಾರ್​ ಲ್ಯಾಂಡ್​ ನಿಮಾರ್ಣದ 11 ಕಾಮಗಾರಿಯ ಇಐಎ ವರದಿಯನ್ನು ಪ್ರಾದೇಶಿಕ ನಿರ್ದೇಶಕರು (ಪರಿಸರ) ಉಡುಪಿ ಇವರಿಂದ ಅನುಮೋದನೆ ಪಡೆದ ಕಾಮಗಾರಿಯನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ತಿಳಿಸಿದ್ದೇನೆ ಎಂದರು.
  • ವಾರಾಹಿ ಯೋಜನೆ: ನಗರೋತ್ಥಾನ ನಾಲ್ಕನೇ ಹಂತದಲ್ಲಿ ಅನುಮೋದನೆಯಾದ 71 ಕಾಮಗಾರಿಗಳಲ್ಲಿ 32 ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಹೇಳಿದ್ದೇನೆ. ಉಡುಪಿ ನಗರಕ್ಕೆ ಪೂರೈಸುವ ವಾರಾಹಿ ಕುಡಿಯುವ ನೀರಿನ ಯೋಜನೆಯನ್ನು ಫೆಬ್ರವರಿಯಲ್ಲಿ ಪೂರ್ಣಗೊಳಿಸಲು ಆದೇಶಿಸಿದ್ದೇನೆ. ಡೀಮ್ಡ್​ ಫಾರೆಸ್ಟ್​ ವಿಚಾರವಾಗಿ ಸಮಸ್ಯೆ ಉಂಟಾಗಿದ್ದು, ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಿ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

    ಯೋಜನೆ ಪೂರ್ಣಗೊಳಿಸಲು ಗೃಹ ಲಕ್ಷ್ಮಿ ಅದಾಲತ್​
    ಜಿಲ್ಲೆಯಲ್ಲಿ 3.12 ಲಕ್ಷ ಕುಟುಂಬಗಳಿದ್ದು, ಈ ಪೈಕಿ 1,83,072 ಕುಟುಂಬದ ಯಜಮಾನಿಯರು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಅಲ್ಲದೆ, ಜಿಲ್ಲೆಯಲ್ಲಿರುವ ಕೊರಗ ಹಾಗೂ ಮಲೆಕುಡಿಯ ಜನಾಂಗದವರಿು ಈ ಯೋಜನೆ ತಲುಪಬೇಕಿದೆ, ಹೀಗಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ "ಗೃಹಲಕ್ಷ್ಮಿ ಅದಾಲತ್​' ವಿಶೇಷ ಅಭಿಯಾನ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಯಾವುದೇ ಕುಟುಂಬಕ್ಕೂ ಈ ಯೋಜನೆ ಕೈತಪ್ಪದಂತೆ ನೋಡಿಕೊಳ್ಳಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ ಎಂದು ಸಚಿವೆ ತಿಳಿಸಿದರು. ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ಜಿಪಂ ಸಿಇಒ ಪ್ರಸನ್ನ ಎಚ್​. ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net