

ವಿಜಯವಾಣಿ ಸುದ್ದಿಜಾಲ ಉಡುಪಿ
ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯಡಿ 438 ಹಾಗೂ ನರೇಗಾ ಯೋಜನಯಡಿ 420 ಕಾಲು ಸಂಕ ನಿರ್ಮಾಣ ಮಾಡಲಾಗುತ್ತಿದ್ದು, ಇದಕ್ಕಾಗಿ 8 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದರು.
ಉಡುಪಿ ಜಿಪಂನ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಮೇ 11ರಂದು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ ವರ್ಷ ಕಡಲ್ಕೊರೆತಕ್ಕೆ ಘೋಷಿಸಿದ್ದ 5 ಕೋಟಿ ರೂ. ಮಂಜೂರು ಮಾಡಲಾಗಿದೆ. ಆದರೆ, ಸಂಪೂರ್ಣ ಕಾಮಗಾರಿಗೆ 200 ಕೋಟಿ ರೂ. ಅನುದಾನ ಬೇಕಾಗುತ್ತದೆ ಎಂದು ಬೇಡಿಕೆ ಇಟ್ಟಿದ್ದಾರೆ. 60ರಿಂದ 70 ಕೋಟಿ ರೂ.ವರೆಗೆ ಅನುದಾನ ಬಿಡುಗಡೆ ಆಗುವ ಭರವಸೆ ಇದೆ. ಅಂಗನವಾಡಿ, ಶಾಲೆಗಳ ರಿಪೇರಿಗೆ ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ನಿಂದ ಅನುದಾನ ಕೊಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾತನಾಡಿ, ಭಾರತ-ಪಾಕಿಸ್ತಾನ ಯುದ್ಧದ ಹಿನ್ನೆಲೆಯಲ್ಲಿ ಡಿಐಜಿ ಸೂಚನೆಯ ಮೇರೆಗೆ ಜಿಲ್ಲೆಯ ವಿವಿಧೆಡೆ ಮಾಕ್ ಡ್ರಿಲ್ ಮಾಡಲಾಗುತ್ತಿದೆ. ಮಣಿಪಾಲದ ಕೆಎಂಸಿಯಲ್ಲಿ ಕಲ್ಪಿತ ಕಾರ್ಯಾಚರಣೆ ಮಾಡಲಾಗಿದೆ. ಅಗ್ನಿಶಾಮಕ ಠಾಣೆಗಳಿಗೂ ಸಹ ಅಗತ್ಯ ಪರಿಕರಗಳೊಂದಿಗೆ ವಿಪತ್ತು ಸಂದರ್ಭ ಎದುರಿಸಲು ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಒಂದೊಮ್ಮೆ ಸಂದಿಗ್ಧ ಪರಿಸ್ಥಿತಿ ಎದುರಾದರೆ ಜಿಲ್ಲೆಯಲ್ಲಿ 166 ಕಾಳಜಿ ಕೇಂದ್ರ ಮತ್ತು 50 ಬೆಡ್ಗಳಿರುವ 54 ಆಸ್ಪತ್ರೆಯನ್ನೂ ಗುರುತಿಸಲಾಗಿದೆ ಎಂದರು.
ಕಡಲಿನಲ್ಲಿ ಯಾವುದೇ ಶಂಕಾಸ್ಪದ ಬೋಟ್ ಅಥವಾ ದ್ವೀಪಗಳಲ್ಲಿ ಅಪರಿಚತ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಕೋಸ್ಟಲ್ ಪೊಲೀಸರಿಗೆ ಮಾಹಿತಿ ನೀಡಲು ಮೀನುಗಾರರಿಗೆ ಈಗಾಗಲೇ ಮೀನುಗಾರಿಕಾ ಇಲಾಖೆ ಸೂಚಿಸಿದೆ. ಒಂದೇ ಬೋಟ್ ಮೂಲಕ ಮೀನುಗಾರಿಕೆಗೆ ತೆರಳದೆ 2-3 ಬೋಟ್ಗಳು ಒಟ್ಟಿಗೆ ಮೀನುಗಾರಿಕೆ ಮಾಡಲು ತಿಳಿಸಲಾಗಿದೆ. ಮೀನುಗಾರರಲ್ಲಿಯೇ ನುರಿತ ಈಜುಪಟುಗಳು ಹಾಗೂ ಮುಳುಗುತಜ್ಞರನ್ನು ಕೋಸ್ಟಲ್ ಎಸ್ಪಿ ಗುರುತಿಸಿದ್ದು ಅವರನ್ನೂ ಸಹ ಕಡಲಿನ ಗಸ್ತು ಸಂದರ್ಭಗಳಲ್ಲಿ ಬಳಸಿಕೊಳ್ಳಲಿದ್ದೇವೆ ಎಂದು ಡಿಸಿ ವಿದ್ಯಾಕುಮಾರಿ ತಿಳಿಸಿದರು.
ದೇಶ ಎಂದಾಗ ನಾವೆಲ್ಲರೂ ಒಂದೇ. ಪಾಕಿಸ್ತಾನದ ವಿರುದ್ಧದ ಯುದ್ಧಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ವಿರೋಧ ಪಕ್ಷ$ವಾಗಿರುವ ಕಾಂಗ್ರೆಸ್ ಸಹಕರಿಸುತ್ತದೆ ಎಂದು ಹೈಕಮಾಂಡ್ ಈಗಾಗಲೇ ಹೇಳಿದೆ. ಕದನ ವಿರಾಮ ಘೋಷಿಸಿದರೂ ಗಡಿಯಲ್ಲಿ ಪಾಕಿಸ್ತಾನದವರು ಶೆಲ್ ದಾಳಿ ಮಾಡುತ್ತಿರುವ ವಿಚಾರ ನನಗೆ ತಿಳಿದಿಲ್ಲ. ರಾಜ್ಯದ ಕರಾವಳಿಗೆ ಮಿಸೈಲ್ ದಾಳಿ ದೂರದ ಮಾತು. ನಾವೆಲ್ಲರೂ ಇಲ್ಲಿ ಸೇಫ್ ಆಗಿದ್ದೇವೆ. | ಲಕ್ಷ್ಮೀ ಹೆಬ್ಬಾಳ್ಕರ್. ಉಸ್ತುವಾರಿ ಸಚಿವೆ