ವಿಶ್ವಕ್ಕೆ ಯೋಗ ಸಂಸ್ಕೃತಿ ನೀಡಿದ್ದು ಭಾರತ...

Yoga Day 1
Published on

ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಶ್ಲಾಘನೆ

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಇಂದಿನ ಯುವಸಮುದಾಯವೇ ದೇಶದ ಉಜ್ವಲ ಭವಿಷ್ಯವಾಗಿದೆ. ಇಂದು ನಾವಿದ್ದೇವೆ, ಮುಂದಿನ ದಿನಗಳಲ್ಲಿ ತಾವುಗಳು ಬರುತ್ತೀರಿ. ತಲೆತಲಾಂತರದ ನಮ್ಮ ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ತಮ್ಮ ಮೇಲಿದೆ. ಸಮಸ್ತ ವಿಶ್ವಕ್ಕೇ ನಮ್ಮ ಭಾರತವು ಯೋಗ ಸಂಸ್ಕೃತಿಯನ್ನು ನೀಡಿದೆ. ಅದನ್ನು ರಕ್ಷಿಸಿ, ಮುನ್ನಡೆಸುವ ಜವಾಬ್ದಾರಿ ಎಲ್ಲರದ್ದೂ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ  ಹೆಬ್ಬಾಳ್ಕರ್​ ತಿಳಿಸಿದರು.

ಉಡುಪಿಯ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಆಯುಷ್​ ಇಲಾಖೆ ಹಾಗೂ ಇನ್ನಿತರ ಇಲಾಖೆ ಸಹಭಾಗಿತ್ವದಲ್ಲಿ ಜೂನ್​ 21ರಂದು ಆಯೋಜಿಸಿದ್ದ ಅಂತಾರಾಷ್ಟ್ರೀಯ 11ನೇ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಧಾನಿ ಮೋದಿಯ ಶ್ಲಾಘನೆ

2222
ಯೋಗದ ಮಹತ್ವವನ್ನು ಪಸರಿಸಲು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್​ 21ಅನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿದ್ದಾರೆ. ಜಗತ್ತಿನ 185ಕ್ಕೂ ಅಧಿಕ ರಾಷ್ಟಗಳು ಇಂದು ಯೋಗ ದಿನವನ್ನಾಗಿ ಆಚರಿಸುತ್ತಿವೆ ಎಂದು ಶ್ಲಾಘಿಸಿದರು. ವಿಶ್ವವೇ ಭಾರತದ ಆರೋಗ್ಯ ಹಾಗೂ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಯೋಗ ಪರಂಪರೆಯನ್ನು ನಿತ್ಯ ಅನುಸರಿಸಬೇಕು. ಪ್ರತಿದಿನ ಕನಿಷ್ಠ 30 ನಿಮಿಷವಾದರೂ ಯೋಗ ಮಾಡಬೇಕು ಎಂದರು.

ಯೋಗದ ವಿಶೇಷತೆ ಹಾಗೂ ಮಹತ್ವದ ಕುರಿತಾಗಿ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಮಾತನಾಡಿದರು.

ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಅಶೋಕ ಕೊಡವೂರು, ಉಡುಪಿ ತಾಲೂಕು ಅಧ್ಯಕ್ಷ ರಮೇಶ ಕಾಂಚನ್​, ಪ್ರಸಾದರಾಜ್​ ಕಾಂಚನ್​, ಉದಯಕುಮಾರ್ ಮುನಿಯಾಲು, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಪಂ ಸಿಇಒ ಪ್ರತೀಕ ಬಾಯಲ್​, ಡಿಎಫ್ಒ ಗಣಪತಿ ಉಪಸ್ಥಿತರಿದ್ದರು.

ಜಿಲ್ಲಾ ಆಯುಷ್​ ಅಧಿಕಾರಿ ಡಾ. ಸತೀಶ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್​ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ. ಹೇಮಲತಾ ವಂದಿಸಿದರು.

ಆರೋಗ್ಯದ ಗುಟ್ಟು ತೆರೆದಿಟ್ಟ ಸಚಿವೆ ಲಕ್ಷ್ಮೀ!

Laxmi Box
ಯೋಗವೆಂದರೆ ಕೇವಲ ವ್ಯಾಯಾಮ, ಪ್ರಾಣಾಯಾಮ ಮಾತ್ರವಲ್ಲ. ಅದೊಂದು ಆರೋಗ್ಯಕರ ಜೀವನದ ವಿಧಾನ, ಯೋಗವಿದ್ದಲ್ಲಿ ರೋಗವಿಲ್ಲ. ಅದರಿಂದ ಮನಸ್ಸಿಗೆ ಉಲ್ಲಾಸ ಸಿಗುತ್ತದೆ. ನಾನು 25 ವರ್ಷದಿಂದ ಯೋಗಾಭ್ಯಾಸ ಮಾಡುತ್ತಿದ್ದೇನೆ. ದಿನಕ್ಕೆ 15 ಗಂಟೆ ಕೆಲಸ ಮಾಡುವ ನನ್ನ ಸಾಮರ್ಥ್ಯದ ಹಿಂದೆ ಯೋಗದ ಬಲವಿದೆ. ಕಳೆದ ಜ.14ರಂದು ನಾನು ಅಪಘಾತಕ್ಕೊಳಗಾಗಿದ್ದು, ತೀವ್ರ ಬೆನ್ನು ನೋವಿನಿಂದಾಗಿ ಇಂದು ಯೋಗ ಮಾಡಲು ಸಾಧ್ಯವಾಗಿಲ್ಲ. ಬಾಬಾ ರಾಮದೇವ ಅವರ ಐದು ಶಿಬಿರಗಳಲ್ಲಿ ನಾನು ಭಾಗವಹಿಸಿದ್ದೆ. ವಾರಕ್ಕೆ ಐದು ದಿನ ಯೋಗ ಮಾಡುತ್ತೇನೆ. ಪ್ರತಿದಿನ 25ರಿಂದ 50 ಸೂರ್ಯ ನಮಸ್ಕಾರ, ಭುಜಂಗಾಸನ, ವೀರಭದ್ರಾಸನ, ಪ್ರಾಣಾಯಾಮ ಮಾಡುತ್ತಿದ್ದೆ. ಯೋಗಾಸನವೇ ನನ್ನ ಆರೋಗ್ಯದ ಗುಟ್ಟು ಎಂದು ಸಚಿವೆ ಲಕ್ಷ್ಮೀ ತಿಳಿಸಿದರು.

ಉಡುಪಿ ಜಿಲ್ಲೆ ಎಸ್​ಎಸ್​ಎಲ್​ಸಿಯಲ್ಲಿ ಎರಡನೇ ಹಾಗೂ ಪಿಯುಸಿಯಲ್ಲಿ ಮೊದಲ ಸ್ಥಾನ ಗಳಿಸಿದ್ದು ಶೈಕ್ಷಣಿಕವಾಗಿ ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡಿದೆ. ದೇಶದ ಸಂಸ್ಕೃತಿ, ಆಚಾರ-ವಿಚಾರವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಗುರು-ಹಿರಿಯರನ್ನು ಗೌರವಿಸಬೇಕು. ಪಾಲಕರು ಮಕ್ಕಳೇ ನಮ್ಮ ಆಸ್ತಿ ಎನ್ನುತ್ತಾರೆ. ಅದರಂತೆ ಮಕ್ಕಳೂ ಸಹ ತಂದೆ-ತಾಯಿಯೇ ನಮ್ಮ ಆಸ್ತಿ ಎನ್ನುವಂತೆ ನೋಡಿಕೊಳ್ಳಬೇಕು. | ಲಕ್ಷ್ಮೀ ಹೆಬ್ಬಾಳ್ಕರ್​. ಉಡುಪಿ ಉಸ್ತುವಾರಿ ಸಚಿವೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net