

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ದೂರದೃಷ್ಟಿಯ ಮುತ್ಸದ್ದಿ, ಶ್ರಮಜೀವಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಸಮಾಜದ ದೊಡ್ಡ ಆಸ್ತಿ. ಬೆಳಗಾವಿಯ ಸಮಗ್ರ ಅಭಿವೃದ್ಧಿಯಲ್ಲಿ ಡಾ.ಪ್ರಭಾಕರ ಕೋರೆ ನೇತೃತ್ವದ ಕೆಎಲ್‌ಇ ಸಂಸ್ಥೆಯ ಕೊಡುಗೆ ಅಪಾರವಾದದ್ದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ನೂತನವಾಗಿ ಆರಂಭಿಸಿರುವ ಕೆಎಲ್‌ಇ ಫರ್ಟಿಲಿಟಿ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಜೀವನಶೈಲಿಯಿಂದ ಮಕ್ಕಳ ವಂಚಿತ ದಂಪತಿಗಳಿಗೆ ಕೆಎಲ್‌ಇ ಫರ್ಟಿಲಿಟಿ ಸೆಂಟರ್ ವರದಾನವೇ ಆಗಿದೆ. ಸಾರ್ವಜನಿಕರು ನೂತನ ತಂತ್ರಜ್ಞಾನದ ಸೌಲಭ್ಯ ಪಡೆದುಕೊಳ್ಳಬೇಕು ಎಂದರು. ಕೆಎಲ್‌ಇ ಸಂಸ್ಥೆಯ ಗುಣಾತ್ಮ ಕ ಶಿಕ್ಷಣ ಮತ್ತು ಆರೋಗ್ಯ ಸೇವೆಗಾಗಿ ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ, ಗೋವಾ ಜತೆಗೆ ವಿದೇಶಗಳಿಂದಲೂ ಜನರು ಬೆಳಗಾವಿಯತ್ತ ಮುಖ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಪ್ರಧಾನಮಂತ್ರಿ, ರಾಷ್ಟ್ರಪತಿಗಳೂ ಕೆಎಲ್‌ಇಗ ಕೆಎಲ್ಇ ಸಂಸ್ಥೆಯ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂದರೆ ಅದು ಡಾ.ಕೋರೆ ಅವರ ತಾಕತ್ತು ಎಂದರು.
ಕೆಎಲ್‌ಇ ಸಂಸ್ಥೆಯ ಎಲ್ಲ ಸಿಬ್ಬಂದಿಯ ಸಹಕಾರದಿಂದ ಸಂಸ್ಥೆ ಬೆಳೆದಿದೆಯಾದರೂ ಟೀಮ್ ಲೀಡರ್ ಶಕ್ತಿ ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. 41 ವರ್ಷದ ಹಿಂದೆ ಅವರು ಸಂಸ್ಥೆಯ ಚುಕ್ಕಾಣಿ ಹಿಡಿಯುವಾಗ 34ರಷ್ಟಿದ್ದ ಅಂಗ ಸಂಸ್ಥೆಗಳ ಸಂಖ್ಯೆ ಇಂದು 310ಕ್ಕೆ ಏರಿಸಿದ್ದಾರೆ. ಈ ಭಾಗದಲ್ಲಿ ಕೆಎಲ್‌ಇ ಆಸ್ಪತ್ರೆ ಇಲ್ಲದಿದ್ದರೆ ನೆರೆ ಮಹಾರಾಷ್ಟ್ರ ಮತ್ತು ದೂರದ ಬೆಂಗಳೂರು ಆಶ್ರಯಿಸುವ ಪರಿಸ್ಥಿತಿ ಇರುತ್ತಿತ್ತು. ಒಂದೇ ಸೂರಿನಡಿ ಅತ್ಯಾಧುನಿಕ ಸೌಲಭ್ಯ ಕಲ್ಪಿಸಿ ಸಾಮಾಜಿಕ ಬದ್ಧತೆ, ಕಾಳಜಿ ಮೂಲಕ ಸಮಸ್ತ ಉತ್ತರ ಕರ್ನಾಟಕದ ಜನರ ಆರೋಗ್ಯ ಕಾಪಾಡುತ್ತಿದ್ದು, ವಿಶ್ವದ ಭೂಪಟದಲ್ಲಿ ಬೆಳಗಾವಿ ಕಂಗೊಳಿಸುವಂತೆ ಮಾಡಿ ಶ್ರೇಯಸ್ಸು ಡಾ.ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತದೆ. ಲಿಂಗಾಯತ ಸಮಾಜದ ಇನ್ನಷ್ಟು ಬಲಶಾಲಿಯಾಗಲು ಸಮಾಜದ ದೊಡ್ಡ ಶಕ್ತಿಯಾಗಿರುವ ಡಾ.ಪ್ರಭಾಕರ ಕೋರೆ ಅವರ ಮಾರ್ಗದರ್ಶನ ಅವಶ್ಯಕವಾಗಿದೆ ಎಂದರು. ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಮಾತನಾಡಿ, ಫರ್ಟಿಲಿಟಿ ಕೇಂದ್ರ ಜನಸೇವೆಗೆ ಅರ್ಪಣೆಯಾಗಿರುವುದರಿಂದ ಆಸ್ಪತ್ರೆಗೆ ಮತ್ತೊಂದು ಗರಿ ಮೂಡಿದೆ. ಇತ್ತೀಚಿನ ದಿನಗಳಲ್ಲಿ ದಂಪತಿಗಳಲ್ಲಿ ಮಕ್ಕಳ ಫಲವತ್ತತೆ ಕಡಿಮೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ನೂತನ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಕೇಂದ್ರವನ್ನು ವ್ಯವಹಾರಿಕವಾಗಿ ನೋಡದೇ ಮಕ್ಕಳಿಲ್ಲದ ದಂಪತಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಿದೆ. ಖಾಸಗಿ ಕ್ಷೇತ್ರದಲ್ಲಿ ಸುಮಾರು 5,500ಕ್ಕೂ ಅಧಿಕ ಹಾಸಿಗೆ ಆಸ್ಪತ್ರೆ ಮಾಡಬೇಕೆನ್ನುವ ಉದ್ದೇಶದಿಂದ ಮುನ್ನಡೆಯುತ್ತಿದ್ದು ಇನ್ನೆರಡು ತಿಂಗಳಲ್ಲಿ ಹುಬ್ಬಳ್ಳಿಯಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯೂ ಜನಸೇವೆಗೆ ಅರ್ಪಿಸಲಾಗುವುದು ಎಂದರು. ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಡಾ.ವಿ.ಎಸ್.ಸಾಧುನವರ, ಡಾ.ವಿಶ್ವನಾಥ ಪಾಟೀಲ, ಕಾಹೆರ ಉಪಕುಲಪತಿ ಡಾ.ನಿತಿನ ಗಂಗಾನೆ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಎನ್.ಎಸ್. ಮಹಾಂತಶೆಟ್ಟಿ, ಡಾ.ವಿಜಯಕುಮಾರ ಎಸ್., ಡಾ. ಸುರಭಿ ಅರೋರಾ, ಡಾ.ಜಯಶ್ರೀ ರೂಗೆ, ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ.ಎಂ.ದಯಾನಂದ, ಡಾ.ನಂದೇಶ್ವರ ಪಾಟೀಲ ಇತರರಿದ್ದರು.
ನೆರೆಯ ಮಹಾರಾಷ್ಟ್ರ ಸರ್ಕಾರ ಶಿಕ್ಷಣ ಸಂಸ್ಥೆ ತೆರೆಯಲು ಕೆಎಲ್‌ಇ ಸಂಸ್ಥೆಗೆ ಸಾಕಷ್ಟು ಸಹಾಯ ಹಾಗೂ ಸಹಕಾರ ನೀಡುತ್ತಿದೆ. ಅದರಂತೆ ಮುಂಬೈನ ಫಾಮ್ ಬೀಚ್‌ನಲ್ಲಿ ನಿರ್ಮಿಸಿರುವ ಶಾಲೆಯನ್ನು ಜನಸೇವೆಗೆ ಅರ್ಪಿಸಲಾಗುವುದು. ವಿಶ್ವವಿದ್ಯಾಲಯ ಸ್ಥಾಪನೆಗೂ 10 ಎಕರೆ ಜಾಗೆ ನೀಡಿದ್ದಾರೆ. ಬೆಳಗಾವಿಯ ಬಿಮ್ಸ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ವಹನೆಯನ್ನು ಸಾಮಾಜಿಕ ಕಳಕಳಿ ಹೊಂದಿರುವ ಕೆಎಲ್‌ಇ ಸಂಸ್ಥೆಗೆ ವಹಿಸಿದರೆ ಇನ್ನಷ್ಟು ಅತ್ಯುತ್ತಮ ಸೇವೆ ನೀಡಲಾಗುವುದು ಎಂದು ಪ್ರಭಾಕರ ಕೋರೆ ಅಭಿಪ್ರಾಯಪಟ್ಟರು.