ಬಿಜೆಪಿಗರು ರಾಜ್ಯಕ್ಕಾಗುತ್ತಿರುವ ಅನ್ಯಾಯ ಪ್ರಶ್ನಿಸಲಿ

LAXMI HEBBALKAR
Published on

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಇಂಧನ, ಅಡುಗೆ ಅನಿಲ, ಟೋಲ್‌ಗೇಟ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಮೊದಲು ಪ್ರತಿಭಟನೆ ನಡೆಸಲಿ. ಕೇಂದ್ರದಲ್ಲಿ ಪ್ರಶ್ನಿಸಲಾಗದ ನಾಯಕರು ಈಗ ಕಾಂಗ್ರೆಸ್ ವಿರುದ್ಧ ಪ್ರತಿಭಟಿಸಲು ಮುಂದಾಗಿರುವುದು ಹಾಸ್ಯಾಸ್ಪದ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿನ ದರ ಏರಿಕೆ ವಿಷಯದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಿ ರಾಜ್ಯಕ್ಕೆ ನ್ಯಾಯ ಕೊಡಿಸಲಿ. ನಮ್ಮ ಹಕ್ಕು ನಮ್ಮ ತೆರಿಗೆ ಅಂತ ಹೋರಾಟ ಮಾಡಿದರೂ ಪ್ರಯೋಜನವಾಗಲಿಲ್ಲ. ಕೇಂದ್ರ ಸರ್ಕಾರ ಪ್ರಶ್ನಿಸುವ ಧೈರ್ಯ ರಾಜ್ಯ ಬಿಜೆಪಿ ನಾಯಕರಿಗೆ ಇದೆಯೇ?. ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿದರೆ ಪ್ರಯೋಜನವಿಲ್ಲ ಎಂದರು.

ಬಿಜೆಪಿ ಮಾಡಿದ ತಪ್ಪಿಗೆ ಗುತ್ತಿಗೆದಾರರಿಗೆ ಸಂಕಷ್ಟ:ಬಿಜೆಪಿ ಸರ್ಕಾರ ಕಡೇ ದಿನಗಳಲ್ಲಿ ಮಾಡಿದ ತಪ್ಪಿನಿಂದಾಗಿ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಕ್ಕ ಸಿಕ್ಕಂತೆ ಟೆಂಡರ್ ಕರೆದು, ಯಾವುದೇ ಹಣ ಬಿಡುಗಡೆ ಮಾಡದೆ ಹೋದರು. ಇದೀಗ ಹಣ ಬಿಡುಗಡೆ ಮಾಡಿ ಅಂತ ನಮ್ಮನ್ನು ಕೇಳುತ್ತಿದ್ದಾರೆ. ಗುತ್ತಿಗೆದಾರರ ಸಂಕಷ್ಟಕ್ಕೆ ಹಿಂದಿನ ಬಿಜೆಪಿ ಸರ್ಕಾರವೇ ಹೊಣೆ. ಅವತ್ತು ಬಿಜೆಪಿಯ ದುರಾಡಳಿತ ಪರಿಣಾಮ ನಾವು ಎದುರಿಸುತ್ತಿದ್ದೇವೆ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net